ಅಗ್ಗದ ಬಡ್ಡಿ ದರದ ಕೃಷಿ ಸಾಲ ಪಡೆಯಿರಿ
ಕ.ಪ್ರ. ವಾರ್ತೆ ಟಿ ರಾಮನಗರ ಟಿ ಮೇ 28
ಅಗ್ಗದ ಬಡ್ಡಿ ದರದಲ್ಲಿ ದೊರೆಯುವ ಕೃಷಿ ಸಾಲ ಪಡೆದು, ಸದ್ಬಳಕೆ ಮಾಡಿಕೊಳ್ಳುವಂತೆ ರೈತರಿಗೆ ಕಾರ್ಪೋರೇಷನ್ ಬ್ಯಾಂಕಿನ ಬೆಂಗಳೂರು ಕೇಂದ್ರ ಕಚೇರಿಯ ಪ್ರಧಾನ ವ್ಯವಸ್ಥಾಪಕ ಕೆ.ರಾಮಮೂರ್ತಿ ಸಲಹೆ ನೀಡಿದರು.
ನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠ ಶಾಲೆಯ ಆವರಣದಲ್ಲಿ ಮಂಗಳವಾರ ನಡೆದ ಕೃಷಿ ಸಾಲ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಷ್ಟೋ ರೈತರು ಸಮರ್ಪಕ ಮಾಹಿತಿ ಇಲ್ಲದೆ ಸಾಲ ಸೌಲಭ್ಯದಿಂದ ವಂಚಿತರಾಗುತ್ತಿರುವ ಬಗ್ಗೆ ವಿಷಾದಿಸಿದರು.
ಬ್ಯಾಂಕಿಂಗ್ ಸಂಸ್ಥೆಗಳು ವಾಹನ, ಗೃಹ, ಉದ್ಯಮ ಸಾಲದಷ್ಟೇ ಒತ್ತನ್ನು ಕೃಷಿ ಸಾಲಕ್ಕೂ ನೀಡುತ್ತಿವೆ. ಈ ಕುರಿತು ರೈತರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಸಾಲ ಮೇಳ ಕಾರ್ಯಕ್ರಮವನ್ನು ತಮ್ಮ ಬ್ಯಾಂಕ್ ಆಯೋಜಿಸಿದೆ ಎಂದು ಅವರು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಕೃಷಿ ಯಾಂತ್ರೀಕರಣವಾಗುತ್ತಿದೆ. ಈ ನಿಟ್ಟಿನಲ್ಲಿ ಯಂತ್ರೋಪಕರಣಗಳ ಖರೀದಿ ಸಹಿತ ಕೃಷಿ ಕ್ಷೇತ್ರಕ್ಕೆ ಪೂರಕವಾದ ಯೋಜನೆಗಳಿಗೆ ತಮ್ಮ ಬ್ಯಾಂಕ್ ಸಾಲ ಒದಗಿಸುತ್ತಿದೆ. ಅರ್ಹ ರೈತರು ಸಾಲ ಪಡೆದು, ಸಕಾಲದಲ್ಲಿ ಮರುಪಾವತಿಸಬೇಕು ಎಂದು ರಾಮಮೂರ್ತಿ ಹೇಳಿದರು.
ಬಿತ್ತನೆ ಬೀಜಕ್ಕೂ ಸಾಲ: ರೈತ ಸಮುದಾಯದ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ನಾನಾ ಯೋಜನೆಗಳನ್ನು ಜಾರಿಗೊಳಿಸಿದೆ. ಬಿತ್ತನೆ ಬೀಜ, ಗೊಬ್ಬರ ಮತ್ತು ಯಂತ್ರೋಪಕರಣಗಳಿಗೆ ಸಬ್ಸಿಡಿ ಸೌಲಭ್ಯ ನೀಡಲಾಗಿದೆ.
ಇಷ್ಟಾಗಿಯೂ ಖರೀದಿಸಲು ಆರ್ಥಿಕವಾಗಿ ಸಬಲರಲ್ಲದ ರೈತರಿಗೆ ಬ್ಯಾಂಕ್ ಅಥವಾ ಸಹಕಾರ ಸಂಘಗಳ ಮೂಲಕ ಸಾಲ ಕೊಡಿಸಲು ಕೃಷಿ ಇಲಾಖೆ ಕ್ರಮ ಕೈಗೊಂಡಿದೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಅಣ್ಣಯ್ಯ ತಿಳಿಸಿದರು.
ರೇಷ್ಮೆಗೆ ಹೆಚ್ಚು ಸಬ್ಸಿಡಿ: ರೇಷ್ಮೆ ಕೃಷಿ ಅವಲಂಬಿತ ರೈತರಿಗೆ ಯಾಂತ್ರೀಕರಣಕ್ಕೆ ರು.75 ಸಾವಿರದಿಂದ 1 ಲಕ್ಷ, ಟ್ರ್ಯಾಕ್ಟರ್ ಕೊಳ್ಳುವಿಕೆಗೆ ರು.75 ಸಾವಿರ, ರೇಷ್ಮೆ ಸಲಕರಣೆಗಳಿಗೆ ರು.75 ಸಾವಿರ, ಪ್ರತಿ ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿಗೆ ರು.55 ಸಾವಿರ, ಹಿಪ್ಪುನೇರಳೆ ನರ್ಸರಿಗೆ ರು.75 ಸಾವಿರ ಸಹಾಯ ಧನವನ್ನು ನೀಡಲಾಗುತ್ತಿದೆ ಎಂದು ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಲಕ್ಷ್ಮಿಪತಿ ರೆಡ್ಡಿ ವಿವರಿಸಿದರು.
ಬ್ಯಾಂಕಿನ ಬೆಂಗಳೂರು ಪ್ರಾಂತಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಸ್. ನಾರಾಯಣನ್, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಗುರುರಾಜ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿವೇಕ್, ಕಾರ್ಪೋರೇಷನ್ ಬ್ಯಾಂಕಿನ ಆರ್ಥಿಕ ಸಾಕ್ಷರತಾ ಅಧಿಕಾರಿ ಸುರೇಶ್ ಬಾಬು, ಚಂದ್ರಕಲಾ ಭಾಗವಹಿಸಿದ್ದರು. ಬ್ಯಾಂಕಿನ ಶಾಖಾ ವ್ಯವಸ್ಥಾಪಕ ಕೆಂಚಪ್ಪ ಸ್ವಾಗತಿಸಿದರು. ದಿವ್ಯರಾಣಿ ನಿರೂಪಿಸಿದರು. ಅಭಿನಂದನ್ ವಂದಿಸಿದರು.