ಗುರುಪುರಸ್ಕಾರ ಸಮಾರಂಭ
ಕನಕಪುರ: ಶಿಕ್ಷಣ ಫೌಂಡೇಷನ್ ವತಿಯಿಂದ ಬೆಂಗಳೂರಿನ ಮೈಂಡ್ಟ್ರೀ ಸಂಸ್ಥೆಯ ಸಭಾಂಗಣದಲ್ಲಿ ಗುರುಪುರಸ್ಕಾರ ಸಮಾರಂಭ ನಡೆಯಿತು.
ಸಂಸ್ಥೆಯು ದಕ್ಷಿಣ ಕರ್ನಾಟಕದಲ್ಲಿ ದತ್ತು ಪಡೆದಿರುವ 15 ಜಿಲ್ಲೆಗಳ 1100 ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 80 ಮಂದಿ ಅತ್ಯುತ್ತಮ ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇವರಲ್ಲಿ ಸ್ಪರ್ಧೆಯನ್ನು ಆಯೋಜಿಸಿ ವಿಜೇತರಾದವರನ್ನು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಕಳುಹಿಸುವ ವಿನೂತನ ಯೋಜನೆಗೆ ಚಾಲನೆ ನೀಡಲಾಯಿತು.
ಉದ್ಘಾಟನೆಯನ್ನು ಮೈಂಡ್ಟ್ರೀ ಸಂಸ್ಥೆಯ ಉನ್ನತಾಧಿಕಾರಿ ಲಲಿತಾಹೊಳ್ಳ ನೆರವೇರಿಸಿದರು. ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಫೌಂಡೇಷನ್ ಧರ್ಮದರ್ಶಿ ಅನೀಶ್ ಕುಮಾರ್ ಮಾತನಾಡುತ್ತಾ, ಸಂಸ್ಥೆಯು ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಒದಗಿಸುವ ಹಾಗೂ ಮಕ್ಕಳಲ್ಲಿ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಶಾಲೆಗಳನ್ನು ದತ್ತುಪಡೆದಿದೆ.
ಇಲ್ಲಿ ಬೋಧಿಸುವ ಶಿಕ್ಷಕರಿಗೆ ವಿವಿಧ ರೀತಿಯ ಉತ್ತೇಜನಗಳನ್ನು ನೀಡಲಾಗುತ್ತಿದೆ. ಗುರುಪುರಸ್ಕಾರದೊಂದಿಗೆ ವಿದೇಶ ಪ್ರವಾಸ ಯೋಗವೂ ಸೇರಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಧರ್ಮದರ್ಶಿ ಇಂದಿರಾಶರ್ಮ, ಶ್ರೀವಿದ್ಯಾ, ರಾಜಕುಮಾರ್, ವಿಶ್ವನಾಥ್ ಪಾಲ್ಗೊಂಡಿದ್ದರು.