ಟೈಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಬೀಳ್ಕೊಡುಗೆ
ಕನಕಪುರ: ಕನಕಪುರ ತಾಲೂಕು ಹಾರೋಹಳ್ಳಿ ಗ್ರಾಮದಲ್ಲಿನ ಕೆನರಾ ಬ್ಯಾಂಕ್ ಪ್ರಾಯೋಜಿತ ಗ್ರಾಮೀಣ ಮಹಿಳಾ ಉದ್ಯಮಶೀಲತಾ ತರಬೇತಿ ಸಂಸ್ಥೆ ಆವರಣದಲ್ಲಿ ಟೈಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ತಾಲೂಕು ಕೈಗಾರಿಕಾ ವಿಸ್ತರಣಾಧಿಕಾರಿ ಪ್ರಕಾಶ್ ಉದ್ಘಾಟನೆಯನ್ನು ನೆರವೇರಿಸಿದರು ಸಂಸ್ಥೆಯ ನಿರ್ದೇಶಕ ಬಸಪ್ಪ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮೀಣ ಮಹಿಳೆಯರಲ್ಲಿ ಸ್ವಾವಲಂಬನೆ ಮೂಡಿಸಲು ಆರ್ಥಿಕ ಸದೃಢತೆ ಕಲ್ಪಿಸಲು ಕೆನರಾ ಬ್ಯಾಂಕ್ ಹಾರೋಹಳ್ಳಿಯಲ್ಲಿ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿ ಉಚಿತ ಊಟ, ವಸತಿಗಳ ಸೌಲಭ್ಯದೊಂದಿಗೆ ವಿವಿಧ ರೀತಿಯ ತರಬೇತಿಗಳನ್ನು ಒದಗಿಸುತ್ತಿದೆ. ಟೈಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಗ್ರಾಪಂ ವತಿಯಿಂದ ಉಚಿತ ಟೈಲರಿಂಗ್ ಯಂತ್ರಗಳನ್ನು ಸರ್ಕಾರ ಒದಗಿಸುತ್ತಿದೆ. ಮಹಿಳೆಯರು ಈ ಸೌಲಭ್ಯ ಪಡೆದು ಸ್ವಾವಲಂಬಿಗಳಾಗಬೇಕೆಂದು ನಿರ್ದೇಶಕ ಬಸಪ್ಪ ಕರೆ ನೀಡಿದರು.
ಇದೇ ತಿಂಗಳು ನಿವೃತ್ತರಾಗುತ್ತಿರುವ ನಿರ್ದೇಶಕ ಬಸಪ್ಪನವರನ್ನು ಶಿಬಿರಾರ್ಥಿಗಳು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ, ಸುಜಾತ, ಗವಿರಾಜು ಪಾಲ್ಗೊಂಡಿದ್ದರು. ರೆಹೆನಾಬಾನು ಸ್ವಾಗತಿಸಿದರು. ಪಲ್ಲವಿ ನಿರೂಪಿಸಿದರು. ಅರ್ಚನಾ ವಂದಿಸಿದರು.