ಹೆಚ್ಚುವರಿ ಶುಲ್ಕ ಕುರಿತು ವರದಿ ಶೀಘ್ರ ಕ್ರಮ
ಬೆಂಗಳೂರು: ಸವಲತ್ತುಗಳ ನೆಪದಲ್ಲಿ ಖಾಸಗಿ ವೃತ್ತಿಪರ ಕಾಲೇಜುಗಳು ವಸೂಲಿ ಮಾಡುತ್ತಿರುವ ಹೆಚ್ಚುವರಿ ಶುಲ್ಕ ಕುರಿತಂತೆ ಇನ್ನೊಂದು ವಾರದಲ್ಲಿ ವರದಿ ಪಡೆದು ಮುಂದೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ನಿರ್ಧಾರ ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕೆಲ ಕಾಲೇಜುಗಳು 10 ಸಾವಿರದಿಂದ 38 ಸಾವಿರದವರೆಗೆ ಹೆಚ್ಚುವರಿ ಶುಲ್ಕ ವಸೂಲಿ ಮಾಡಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಸುಮಾರು 76 ನಾನಾ ಸವಲತ್ತುಗಳಿಗೆ ಸಂಬಂಧಿಸಿ ಕಾಲೇಜುಗಳು ಈ ಶುಲ್ಕ ವಸೂಲಿ ಮಾಡುತ್ತಿವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಿಯಂತ್ರಣ ಮಾಡಬೇಕಿದೆ. ಶುಲ್ಕದ ಬಗ್ಗೆ ಸ್ಪಷ್ಟ ನಿಲುವು ತಾಳುವಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಕಾಲೇಜಿಗೆ ಸೂಚಿಸಿದ್ದೇನೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆಗಿನ ಸಭೆಯ ಬಳಿಕ 'ಕನ್ನಡಪ್ರಭ'ಕ್ಕೆ ಅವರು ತಿಳಿಸಿದ್ದಾರೆ. ಹೆಚ್ಚುವರಿ ಶುಲ್ಕ ವಸೂಲಿ ಮಾಡುವ ಅನಿವಾರ್ಯತೆಯ ಬಗ್ಗೆ ಶಿಕ್ಷಣ ಸಂಸ್ಥೆಗಳು ಇಲಾಖೆಯ ಗಮನಕ್ಕೆ ತಂದಿದ್ದಾರೆ. ಆದರೆ ಈ ಶುಲ್ಕಕ್ಕೆ ನಿಯಂತ್ರಣ ಹೇರುವ ಅವಶ್ಯಕತೆಯೂ ಇದೆ. ವಿದ್ಯಾರ್ಥಿಗಳ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರದ ಕ್ರಮ ಹೊರಬೀಳಲಿದೆ ಎಂದು ಅವರು ಹೇಳಿದ್ದಾರೆ.
ಕೆಲ ಕಾಲೇಜುಗಳ ವಿರುದ್ಧ ಗರಂ: ಬಸ್, ವಸತಿ, ಆಹಾರ ಹಾಗೂ ಇತರ ವಿಷಯಗಳ ನೆಪದಲ್ಲಿ ವಿದ್ಯಾರ್ಥಿಗಳಿಂದ ಮಿತಿ ಮೀರಿ ಹಣ ವಸೂಲಿ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕೆಲ ಪ್ರತಿಷ್ಠಿತ ಆಡಳಿತ ಮಂಡಳಿಗಳ ಮುಖ್ಯಸ್ಥರು ಗರಂ ಆಗಿದ್ದಾರೆ. ಕೆಲ ಕಾಲೇಜುಗಳು ಮಾಡುತ್ತಿರುವ ಅವ್ಯವಹಾರದಿಂದ ಖಾಸಗಿ ಕಾಲೇಜುಗಳ ವಿರುದ್ಧ ಜನಾಭಿಪ್ರಾಯ ಮೂಡುತ್ತಿದ ಎಂದು ಮೂಲಗಳು ತಿಳಿಸಿವೆ.