ಎಂಇಎಸ್ ಶಾಸಕರಿಂದ ಮರಾಠಿಯಲ್ಲಿ ಪ್ರಮಾಣ ವಚನ: ಆಕ್ರೋಶ
ಕ.ಪ್ರ. ವಾರ್ತೆ ರಾಮನಗರ ಮೇ 29
ಪ್ರಸಕ್ತ ವಿಧಾನಸಭೆಯಲ್ಲಿ ಎಂಇಎಸ್ ಶಾಸಕದ್ವಯರು ಮರಾಠಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಐಜೂರು ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಮರಾಠಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಬೆಳಗಾವಿ ಶಾಸಕ ಸಂಭಾಜಿ ಪಾಟೀಲ್ ಹಾಗೂ ಖಾನಾಪುರ ಅರವಿಂದ ಪಾಟೀಲ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ನೆಲದಲ್ಲೇ ಹುಟ್ಟಿ ಬೆಳೆದು, ಕನ್ನಡ ಕಲಿತಿದ್ದರೂ ಮರಾಠಿಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಎಂಇಎಸ್ ಶಾಸಕದ್ವಯರು ಸಂವಿಧಾನಕ್ಕೆ ಅಪಚಾರ ಎಸಗಿದ್ದಾರಲ್ಲದೆ ಕನ್ನಡಿಗರ ಭಾವನೆಯನ್ನು ಕೆರಳಿಸಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದರು. ಕನ್ನಡ ವಿರೋಧಿ ಇಬ್ಬರು ಶಾಸಕರಿಗೆ ಕರ್ನಾಟಕ ವಿಧಾನಸಭೆ ಸದಸ್ಯರಾಗಿ ಮುಂದುವರೆಯಲು ನೈತಿಕ ಹಕ್ಕಿಲ್ಲ. ಅವರಿಬ್ಬರನ್ನೂ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ರಾಜ್ಯಪಾಲರು ಮತ್ತು ವಿಧಾನಸಭಾಧ್ಯಕ್ಷರನ್ನು ಆಗ್ರಹಿಸಿದರು.
ಮಸಿ ಬಳಿಯುತ್ತೇವೆ: ಸಂಭಾಜಿ ಪಾಟೀಲ್ ಮತ್ತು ಅರವಿಂದ ಪಾಟೀಲ್ ಅವರಿಬ್ಬರೂ ಕನ್ನಡಕ್ಕೆ ಅಪಮಾನ ಮಾಡಿರುವ ಬಗ್ಗೆ ಬಹಿರಂಗ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಅವರಿಗೆ ಮಸಿ ಬಳಿಯುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಅಧಿಕಾರಿಗಳಿಗೆ ನೀತಿಪಾಠ ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಕನ್ನಡೇತರ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಶಾಸಕರಿಗೇಕೆ ತಿಳಿ ಹೇಳುವ ಕೆಲಸ ಮಾಡಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ನೈಸ್ ಸಂಸ್ಥೆ ಮುಖ್ಯಸ್ಥರೂ ಆಗಿರುವ ಶಾಸಕ ಅಶೋಕ್ ಖೇಣಿ ಅವರಿಗೂ ಕನ್ನಡ ಚೆನ್ನಾಗಿಯೇ ಗೊತ್ತು. ಇಷ್ಟಾಗಿಯೂ ಅವರು ಇಂಗ್ಲಿಷ್ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇಂತಹ ಕನ್ನಡ ವಿರೋಧಿಗಳು ನಮ್ಮ ಶಾಸಕರಾಗಲು ಯೋಗ್ಯರಲ್ಲ ಎಂದು ಕಿಡಿ ಕಾರಿದರು.
ಪ್ರತಿಭಟನೆಯಲ್ಲಿ ಸಂಘಟನೆ ರಾಜ್ಯಾಧ್ಯಕ್ಷ ರಮೇಶಗೌಡ, ಯೋಗೇಶಗೌಡ, ರಂಜಿತಗೌಡ, ಶಂಕರ್, ಕೃಷ್ಣೇಗೌಡ, ಉಮೇಶ್, ಕುಮಾರ್ ಮತ್ತಿತರರು ಭಾಗವಹಿಸಿದ್ದರು.
ನಾಳೆ ಪ್ರತಿಭಟನೆ: ರಾಮನಗರ ಜಿಲ್ಲೆಗೆ ಪದೇ ಪದೇ ಉಸ್ತುವಾರಿ ಸಚಿವರ ಬದಲಾವಣೆಗೆ ಆಕ್ರೋಶ ವ್ಯಕ್ತಪಡಿಸಿರುವ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯು ಈ ಸಂಬಂಧ ನಗರದಲ್ಲಿ ಮೇ 31ರಂದು ಪ್ರತಿಭಟನೆ ಹಮ್ಮಿಕೊಂಡಿದೆ.
ರಾಮನಗರ ಜಿಲ್ಲೆಗೆ ಇನ್ನೂ ಆರು ವರ್ಷ ತುಂಬಿಲ್ಲ. ಬಿಜೆಪಿ ಸರ್ಕಾರದ ಅವಧಿ ಅಂತ್ಯಕ್ಕೆ 7 ಮಂದಿ ಉಸ್ತುವಾರಿ ಸಚಿವರಾಗಿದ್ದರು. ಕಾಂಗ್ರೆಸ್ ಸರ್ಕಾರದಲ್ಲಿ ಕೃಷ್ಣ ಭೈರೇಗೌಡರನ್ನು ನೇಮಿಸಿದ್ದು, ಇದೀಗ ಕೆ.ಜೆ.ಜಾರ್ಜ್ ನೇಮಕವಾಗಿದ್ದಾರೆ. ಹೀಗೆ ಬದಲಾವಣೆಯಿಂದ ಜಿಲ್ಲೆ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಸಂಘಟನೆ ಟೀಕಿಸಿದೆ.