ಬೇರೊಬ್ಬ ವ್ಯಕ್ತಿಯಿಂದ ಪರೀಕ್ಷೆ ಬರೆಸುತ್ತಿದ್ದ ಪ್ರಕರಣ ಬಯಲು
ಚನ್ನಪಟ್ಟಣ: ಬೇರೊಬ್ಬ ವ್ಯಕ್ತಿಯಿಂದ ಅಕ್ರಮವಾಗಿ ಪರೀಕ್ಷೆ ಬರೆಸುತ್ತಿದ್ದ ಪ್ರಕರಣ ಇಲ್ಲಿನ ಕುವೆಂಪು ಕಾಲೇಜಿನಲ್ಲಿ ನಡೆದಿದೆ.
ಬೆಂಗಳೂರು ವಿಶ್ವವಿದ್ಯಾನಿಲಯದ ಅಂತಿಮ ಬಿಎಸ್ಸಿ ತರಗತಿಗೆ ನಡೆಯುತ್ತಿದ್ದ ಗಣಿತ ಶಾಸ್ತ್ರ ಪರೀಕ್ಷೆಗೆ ಕಾಲೇಜಿನ ವಿದ್ಯಾರ್ಥಿ ಶಿವಪ್ರಸಾದ್ ಎಂಬುವವರೊಂದಿಗೆ ಮತ್ತೊಬ್ಬ ವ್ಯಕ್ತಿಯನ್ನು ಕೂರಿಸಿ ಪರೀಕ್ಷೆ ಬರೆಸುವ ಮೂಲಕ ಅಕ್ರಮವೆಸಗಿದ್ದು, ಇದಕ್ಕೆ ಕಾಲೇಜಿನ ಸಿಬ್ಬಂದಿಯ ಸಹಕಾರ ಇರುವುದಾಗಿ ಕಾಲೇಜಿನ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಪರೀಕ್ಷೆ ಬರೆಯ ಬೇಕಿದ್ದ ವ್ಯಕ್ತಿಯ ಬದಲಾಗಿ ಮತ್ತೊಬ್ಬರನ್ನು ಕೂರಿಸಿ ಪರೀಕ್ಷೆ ಬರೆಸಿದ್ದು, ಇದನ್ನು ಕಂಡ ಸಹ ಪರೀಕ್ಷಾರ್ಥಿಗಳು ಮಾಧ್ಯಮಗಳಿಗೆ ಸುದ್ದಿ ಮುಟ್ಟಿಸುವ ಮೂಲಕ ಪ್ರಕರಣವನ್ನು ಬಯಲಿಗೆ ತಂದಿದ್ದಾರೆ.
ಪ್ರಾಂಶುಪಾಲರಿಂದ ಅನುಮತಿ: ಶಿವಪ್ರಸಾದ್ಗೆ ಕೈ ಮುರಿದಿರುವುದಾಗಿ ವೈದ್ಯರು ವರದಿ ನೀಡಿದ್ದು ಅದಕ್ಕಾಗಿ ಅನುಮತಿ ನೀಡಿರುವುದಾಗಿ ಪ್ರಾಂಶುಪಾಲ ಶಿವರುದ್ರಯ್ಯ ಪ್ರಕರಣದ ಬಗ್ಗೆ ಸಮಜಾಯಿಷಿ ನೀಡಲು ಮುಂದಾದರಾದರೂ ಶಿಕ್ಷಣ ಇಲಾಖೆ ಅನುಮತಿ ನೀಡಿರುವ ಬಗ್ಗೆ ದಾಖಲಾತಿ ಕೇಳಿದಾಗ ಪ್ರಾಂಶುಪಾಲರು ನಿರುತ್ತರರಾದರು.
ತಾಲೂಕಿನ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಹಿರಿಮೆ ಹೊಂದಿರುವ ಕುವೆಂಪು ಮಹಾವಿದ್ಯಾಲಯದಲ್ಲಿ ಈ ಪ್ರಕರಣ ನಡೆದಿರುವುದು ಸಂಸ್ಥೆಗೆ ಕಪ್ಪು ಚುಕ್ಕೆಯಂತಾಗಿದ್ದು ಈ ಪ್ರಕರಣದ ಬಗ್ಗೆ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.