ಮತ್ತೆ ರಾಮನಗರ ಉಸ್ತುವಾರಿ ಸಚಿವರು ಬದಲು
ಮತ್ತೀಕೆರೆ ಜಯರಾಮ್
ಕ.ಪ್ರ. ವಾರ್ತೆ ರಾಮನಗರ ಮೇ 29
ಆದೇಶ ಹೊರ ಬಿದ್ದು ದಿನ ತುಂಬುವಷ್ಟರಲ್ಲೇ ರಾಮನಗರದ ಉಸ್ತುವಾರಿ ಸಚಿವರು ಬದಲಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಾಗಿ ಇನ್ನೂ 6 ವರ್ಷ ಪೂರೈಸದ ರಾಮನಗರಕ್ಕೆ ಉಸ್ತುವಾರಿ ಸಚಿವರಾದವರ ಸಂಖ್ಯೆ 9ಕ್ಕೆ ಏರಿದಂತಾಗಿದೆ.
ಮೊನ್ನೆಯಷ್ಟೇ ಹೊರಡಿಸಿದ್ದ ಆದೇಶದಲ್ಲಿ ರಾಮನಗರಕ್ಕೆ ಕೃಷಿ ಸಚಿವ ಕೃಷ್ಣ ಭೈರೇಗೌಡ, ಬೆಂಗಳೂರು ಗ್ರಾಮಾಂತರಕ್ಕೆ ಗೃಹ ಸಚಿವ ಕೆ.ಜೆ.ಜಾರ್ಜ್ ನೇಮಕವಾಗಿದ್ದರು. 24 ತಾಸಿನಲ್ಲೇ ಬದಲಾವಣೆ ಆದೇಶ ಹೊರ ಬಿದ್ದಿದೆ. ಈ ಸಚಿವದ್ವಯರ ಉಸ್ತುವಾರಿ ಜಿಲ್ಲೆಗಳು ಅದಲು-ಬದಲಾಗಿವೆ.
ಸ್ವತಃ ಕೃಷ್ಣ ಭೈರೇಗೌಡ ಅವರ ಕೋರಿಕೆ ಮೇರೆಗೆ ಉಸ್ತುವಾರಿ ಸಚಿವರನ್ನು ಬದಲಿಸಲಾಗಿದೆ ಎಂಬುದು ಸರ್ಕಾರದ ಹೇಳಿಕೆಯಾಗಿದೆ. ಆದರೆ, ವಾಸ್ತವದಲ್ಲಿ ರಾಜಕೀಯ ಕಾರಣಗಳು ಈ ಬದಲಾವಣೆಗೆ ಮೂಲ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಸವಾಲಿನ ಕೆಲಸ: ರಾಮನಗರವು ಒಕ್ಕಲಿಗರ ಪ್ರಾಬಲ್ಯದ ಜಿಲ್ಲೆ. ಈ ಕಾರಣಕ್ಕಾಗಿಯೇ ಒಕ್ಕಲಿಗ ಸಮುದಾಯದ ಕೃಷ್ಣ ಬೈರೇಗೌಡ ಅವರನ್ನೇ ಇಲ್ಲಿಗೆ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿತ್ತು. ಈಗ ಏಕಾಏಕಿ ಬದಲಾವಣೆ ಮಾಡಿರುವುದು ಗುಮಾನಿಗೆಡೆ ಮಾಡಿದೆ. ಈ ಜಿಲ್ಲೆ ಪ್ರತಿನಿಧಿಸುತ್ತಿರುವ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರೆಲ್ಲರೂ ಘಟಾನುಘಟಿಗಳೇ. ಒಂದು ಕಡೆ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ 4ನೇ ಬಾರಿಯ ಮಾಗಡಿ ಸ್ವಪಕ್ಷೀಯ ಶಾಸಕ ಎಚ್.ಸಿ.ಬಾಲಕೃಷ್ಣ ಸಾಥ್ ಇದೆ.
ಚನ್ನಪಟ್ಟಣದಿಂದ 4ನೇ ಬಾರಿ ವಿಧಾನಸಭೆ ಪ್ರವೇಶಿಸಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಸಚಿವ ಸ್ಥಾನ ಸಿಗದೆ ಬೇಸತ್ತಿರುವ ಸತತ 6ನೇ ಬಾರಿ ವಿಧಾನಸಭೆ ಪ್ರವೇಶಿಸಿರುವ ಕನಕಪುರ ಶಾಸಕ ಡಿ.ಕೆ.ಶಿವಕುಮಾರ್. ಹೀಗೆ ಜಿಲ್ಲೆಯಲ್ಲಿ ಎಲ್ಲರೂ ಅನುಭವಿಗಳು ಮಾತ್ರವಲ್ಲದೆ ಪ್ರಭಾವಿ ಜನಪ್ರತಿನಿಧಿಗಳು. ಮೇಲ್ಮನೆ ಸದಸ್ಯರಲ್ಲೂ ಪ್ರಬಲರಿದ್ದಾರೆ.
ಜಗಜ್ಜಾಹೀರ ಸಂಗತಿ: ಇಂತಹ ಕಡೆ ಹುದ್ದೆ ನಿಭಾಯಿಸುವುದು ಅನನುಭವಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ತ್ರಾಸದ ಹಾಗೂ ಸವಾಲಿನ ಕೆಲಸವೇ ಸರಿ. ಇದೆಲ್ಲಕ್ಕಿಂತಲೂ ಕೃಷ್ಣ ಭೈರೇಗೌಡ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಸಂಬಂಧ ಅಷ್ಟಕ್ಕಷ್ಟೇ ಎನ್ನುವುದು ಜಗಜ್ಜಾಹೀರ ಸಂಗತಿಯಾಗಿದೆ.
ಒತ್ತಡದ ತಂತ್ರ : ಜಿಲ್ಲೆಯ ಅಭಿವೃದ್ಧಿ ಮತ್ತು ಆಡಳಿತದ ವಿಷಯದಲ್ಲಿ ಕೃಷ್ಣ ಭೈರೇಗೌಡ ಅವರು ರಾಜಕೀಯ ಬೆರೆಸುವಂತಹವರಲ್ಲ. ಹೀಗಾಗಿ ಅವರು ಪ್ರತಿಪಕ್ಷಗಳ ಶಾಸಕರ ಮಾತಿಗೆ ಮನ್ನಣೆ ನೀಡಬಹುದೆನ್ನುವ ಅನುಮಾನವು ಸಹಜವಾಗಿಯೇ ಕಾಂಗ್ರೆಸಿಗರನ್ನು ಕಾಡುತ್ತಿತ್ತು. ಇದೆಲ್ಲದರ ಅರಿವು ಸ್ವತಃ ಶಿವಕುಮಾರ್ ಅವರಿಗೂ ಇತ್ತು. ನಿಷ್ಪಕ್ಷಪಾತ ಆಡಳಿತ ನಡೆದರೆ ಪಕ್ಷ ಸಂಘಟನೆ ಮತ್ತು ತಮ್ಮ ಪ್ರಾಬಲ್ಯಕ್ಕೆ ಕುತ್ತು ಬರುವುದೆನ್ನುವ ಅಂಶ ಅವರನ್ನು ಕಾಡಿತ್ತು. ಈ ಕಾರಣಕ್ಕೆ ಅವರು
ಕೃಷ್ಣ ಭೈರೇಗೌಡರ ಬದಲಾವಣೆಗೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿರುವ ಶಂಕೆಯಿದೆ.
ಇದೀಗ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ಕೆ.ಜೆ.ಜಾರ್ಜ್ ಹಾಗೂ ಡಿ.ಕೆ.ಶಿವಕುಮಾರ್ ಅವರಿಬ್ಬರೂ ದೋಸ್ತಿಗಳು. ಇಬ್ಬರೂ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಗರಡಿಯಲ್ಲೇ ಪಳಗಿದವರು. ಈ ಬೆಸುಗೆಯೂ ಬದಲಾವಣೆ ಹಿಂದೆ ಕೆಲಸ ಮಾಡಿರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಕಾಂಗ್ರೆಸ್ ಹೊರತಲ್ಲ: 2007ರಲ್ಲಿ ಜೆಡಿಎಸ್- ಬಿಜೆಪಿ ಸರ್ಕಾರವಿದ್ದಾಗ ರಚನೆಯಾದ ಈ ಜಿಲ್ಲೆಗೆ ಮೊದಲಿಗೆ ಎಚ್.ಡಿ. ರೇವಣ್ಣ ಉಸ್ತುವಾರಿ ಸಚಿವರಾಗಿದ್ದರು. ಬಿಜೆಪಿ ಸರ್ಕಾರದಲ್ಲಿ 6 ಬದಲಾವಣೆ ಕಂಡರೆ, ಕಾಂಗ್ರೆಸ್ ಸರ್ಕಾರದಲ್ಲಿ ಇಬ್ಬರಾಗಿದ್ದಾರೆ.
9 ಉಸ್ತುವಾರಿ ಸಚಿವರ ಪೈಕಿ ಈ ಜಿಲ್ಲೆಗೆ ಸೇರಿದವರು ಯೋಗೇಶ್ವರ್ ಒಬ್ಬರೇ. ಉಳಿದ 8 ಮಂದಿಯೂ ಹೊರಗಿನವರು. ನೇಮಕಗೊಂಡು ಜಿಲ್ಲೆಗೆ ಕಾಲಿಡದೆ ಬದಲಾದ ಮೊದಲ ಉಸ್ತುವಾರಿ ಸಚಿವ ಕೃಷ್ಣ
ಭೈರೇಗೌಡ. ಶ್ರೀರಾಮುಲು ಹೆಲಿಕಾಪ್ಟರ್ನಲ್ಲಿ ಹೇಗೆ ಬಂದು ಹೀಗೆ ಹೋಗಿದ್ದರು. ಅವರ ಉಸ್ತುವಾರಿ ಒಂದೇ ಭೇಟಿಗೆ ಸೀಮಿತವಾಗಿತ್ತು.
ರಾಮನಗರ ಜಿಲ್ಲೆಗೆ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸಹಿತ ಆಯಕಟ್ಟಿನ ಹುದ್ದೆಗಳಿಗೆ ಬದಲಾವಣೆ ಹೊಸದೇನಲ್ಲ. ಹೀಗೆ ಪದೇ ಪದೇ ಬದಲಾವಣೆಯಿಂದ ಜಿಲ್ಲೆಯ ಅಭಿವೃದ್ಧಿಗೆ ಅಡ್ಡಿಯಾಗುತ್ತಿರುವ ಅಂಶವು ಆಳುವ ವರ್ಗಕ್ಕೆ ಅರ್ಥವಾಗಬೇಕಿದೆ.