ಯುವಕನ ಪ್ರೀತಿ ಪುಂಡಾಟಕ್ಕೆ ಬೇಸತ್ತ 15 ವರ್ಷದ ಬಾಲೆ ಆತ್ಮಹತ್ಯೆ
ದೊಡ್ಡಬಳ್ಳಾಪುರ: ಶಾಲೆಗೆ ಹೋಗುವಾಗ, ಬರುವಾಗ, ದಾರಿಯಲ್ಲಿ ಸಿಕ್ಕಾಗ, ಎಲ್ಲೆಂದರಲ್ಲಿ ಪ್ರೀತ್ಸೆ, ಪ್ರೀತ್ಸೆ... ಅಂತ ಪ್ರಾಣ ತಿನ್ನುತ್ತಿದ್ದ ಪುಂಡ ಪ್ರೇಮಿಯ ಪುಂಡಾಟಕ್ಕೆ ಬೇಸತ್ತ 15 ವರ್ಷದ ಬಾಲಕಿಯೊಬ್ಬಳು ಮನೆಯಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರ ನಗರದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಇಲ್ಲಿನ ಗಂಗಾಧರಪುರದ ಮಂಜುನಾಥ ಗ್ಯಾಸ್ ಏಜೆನ್ಸಿಸ್ ಬಳಿಯ ನಿವಾಸಿ ನಂಜುಂಡಪ್ಪ ಮತ್ತು ಮಾಧವಿ ಅವರ ಪುತ್ರಿ ಕಾವ್ಯ (15) ಮೃತಪಟ್ಟಿರುವ ದುರ್ದೈವಿ. ಈಕೆ ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಭಾಗದಲ್ಲಿ 9ನೇ ತರಗತಿ ವ್ಯಾಸಂಗ ಮುಗಿಸಿದ್ದಳು. ಮುಂದಿನವಾರದಿಂದ ಹತ್ತನೇ ತರಗತಿಗೆ ಹೋಗಬೇಕಿತ್ತು. ಆದರೆ ಈ ರೀತಿಯಾಗಿ ದುರ್ಮರಣ ಹೊಂದಿರುವುದು ಮಾತ್ರ ವಿಧಿಯ ವಿಪರ್ಯಾಸ.
ಘಟನೆ ವಿವರ: ಈಕೆ ಮನೆಯಿಂದ ಕಾಲೇಜಿಗೆ ಬರುವ ಮತ್ತು ಹೋಗುವ ವೇಳೆ ಮಾರ್ಗ ಮಧ್ಯೆ ಇರುವ ಹಾರ್ಡ್ವೇರ್ ಅಂಗಡಿಯೊಂದರಲ್ಲಿ ಕೆಲಸ ಮಾಡುವ ರಾಮಮೂರ್ತಿ (20) ಎಂಬಾತ ಪ್ರೀತಿಸುವಂತೆ ಕಾಡುತ್ತಿದ್ದ. ಕಳೆದ 2 ತಿಂಗಳಿಂದಲೂ ಆತನ ಉಪಟಳ ಹೆಚ್ಚಾಗಿತ್ತು. ಈ ಪುಂಡ ಪ್ರೇಮಿಯ ಹುಡುಗಾಟಕ್ಕೆ ನಿರಾಕರಿಸಿದ್ದ ಕಾವ್ಯ ಆತನ ನಡತೆಯಿಂದ ಮನನೊಂದಿದ್ದಳು ಎನ್ನಲಾಗಿದೆ. ಬುಧವಾರ ಬೆಳಗ್ಗೆ ಮನೆಯಲ್ಲಿಯೇ ಆಕೆ ದುರ್ಮರಣಕ್ಕೀಡಾಗಿದ್ದಾಳೆ. ಬಚ್ಚಲುಮನೆಗೆ ಹೋಗಿ ಬಾಗಿಲು ಜಡಿದುಕೊಂಡು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಯುವತಿಯ ಅರೆಬಂದ ಶವ ಧಾರುಣ ಸ್ಥಿತಿಯಲ್ಲಿ ದೊರೆತಿದ್ದು, ಹೃದಯವಿದ್ರಾವಕವಾಗಿದೆ.
ಆರೋಪಿ ಬಂಧನ: ಘಟನೆ ಸಂಬಂಧ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪೊಲೀಸರು ಆರೋಪಿ ರಾಮಮೂರ್ತಿಯನ್ನು ಬಂಧಿಸಿದ್ದಾರೆ.