ವಜ್ರಖಚಿತ ಚಿನ್ನದ ನೂತನ ಕಿರೀಟ ಸರ್ಕಾರಕ್ಕೆ ಹಸ್ತಾಂತರ
ಕ.ಪ್ರ. ವಾರ್ತೆ ಮಾಗಡಿ ಮೇ 29
ದೇವರು ಕೊಟ್ಟಿರುವ ಸಂಪತ್ತಿನ ಸ್ವಲ್ಪಭಾಗವನ್ನು ಭಗವಂತನಿಗೆ ಸಮರ್ಪಿಸುವುದು ಭಕ್ತನ ಆದ್ಯ ಕರ್ತವ್ಯವಾಗಬೇಕು ಎಂದು ಶ್ರೀರಂಗ ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಎಸ್. ಸತೀಶ್ ನುಡಿದರು.
ಅವರು ಶ್ರೀರಂಗ ಸೇವಾ ಟ್ರಸ್ಟ ವತಿಯಿಂದ ಶ್ರೀರಂಗನಾಥಸ್ವಾಮಿಗೆ ನೀಡಿದ ವಜ್ರಖಚಿತ ಚಿನ್ನದ ನೂತನ ಕಿರೀಟವನ್ನು ಬುಧವಾರ ಸಂಜೆ ತಹಸೀಲ್ದಾರ್ ಡಾ.ಬಿ.ಆರ್.ಹರೀಶ್ ನಾಯಕ್ ಅವರ ಮೂಲಕ ಸರ್ಕಾರಕ್ಕೆ ಹಸ್ತಾಂತರಿಸಿ ಮಾತನಾಡಿ ಸರ್ವರ ಏಳಿಗೆಗೆ ಸಮರ್ಪಣಾ ಭಾವ ಅಗತ್ಯ ಎಂದರು.
ತಹಶೀಲ್ದಾರ್ ಡಾ.ಬಿ.ಆರ್. ಹರೀಶ್ ನಾಯಕ್ ಕಿರೀಟ ಸ್ವೀಕರಿಸಿ ಮಾತನಾಡುತ್ತಾ ಉಳ್ಳವರು ಇಲ್ಲದವರಿಗೆ ನೀಡುವ ಮೂಲಕ ಹಂಚಿ ತಿನ್ನುವ ಮನೋಭಾವವನ್ನು ರೂಢಿಸಿಕೊಂಡಿರುವ ಶ್ರೀರಂಗ ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಎಸ್. ಸತೀಶ್ ಮತ್ತು ತಂಡದವರ ಸೇವೆಯನ್ನು ಶ್ಲಾಘಿಸಿದರು. ಟ್ರಸ್ಟ್ ಪದಾಧಿಕಾರಿಗಳಾದ ಕಾರ್ಯದರ್ಶಿ ಟಿ.ಎಸ್.ಪ್ರಭು, ಖಜಾಂಚಿ ವೆಂಕಟೇಶ್ ಅಯ್ಯಂಗಾರ್, ಶ್ರೀರಂಗ, ನಿಜಗುಣ, ನಾರಾಯಣಸ್ವಾಮಿ, ಸುರೇಶ್, ಕೆ.ಎಸ್.ಹರೀಶ್, ರಾಮು, ನಾಗರಾಜು, ಚಂದ್ರಶೇಖರ್, ಶೇಷಗಿರಿ, ರಾಜು, ಮೂರ್ತಿ ನಾರಾಯಣ, ಅರ್ಚಕ ಗೋವಿಂದರಾಜು, ಪಾರುಪತ್ತೇಗಾರ ಕೆಂಪಯ್ಯ,ಶಂಕರ್ ಇತರರು ಇದ್ದರು.