ವಿಶೇಷ ನೃತ್ಯ ಕಾರ್ಯಾಗಾರ
ರಾಮನಗರ: ಕರ್ನಾಟಕ ಸಂಗೀತ ಮತ್ತು ನಣತ್ಯ ಅಕಾಡೆಮಿಯು ಜೂನ್ 3ರಿಂದ 7ರವರೆಗೆ ಉಡುಪಿ ಜಿಲ್ಲೆಯ ಮೂಲ್ಕಿಯ ಪುನರೂರಿನ ಶ್ರೀ ವಿಶ್ವನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ ವಿಶೇಷ ನೃತ್ಯ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಕಾರ್ಯಾಗಾರದಲ್ಲಿ ಪ್ರತಿ ದಿನ ಬೆಳಗ್ಗೆ 7 ರಿಂದ 8.30ರವರೆಗೆ ಆಯಾ ಕ್ಷೇತ್ರಗಳಲ್ಲಿ ಹಿರಿಯ ಮತ್ತು ಪರಿಣಿತ ಹೊಂದಿರುವವರಿಂದ ತರಬೇತಿ ನೀಡಲಾಗುವುದು. ಭರತನಾಟ್ಯ ಕ್ಷೇತ್ರದಲ್ಲಿ ಪದ್ಮಿನಿ ರಾಮಚಂದ್ರನ್, ಕಥಕ್ ವಿಭಾಗದಲ್ಲಿ ಜಯಂತಿ ಈಶ್ವರಪುತ್ತಿ, ಕೂಚಿಪುಡಿಯಲ್ಲಿ ಲಕ್ಷ್ಮೀ ರಾಜಾಮಣಿ, ಅಭಿನಯ ಕ್ಷೇತ್ರದಲ್ಲಿ ಇಂದಿರಾ ಕಡಾಂಬಿ ಇವರು ತರಬೇತಿ ನೀಡುವರು. ನಿತ್ಯ ನೃತ್ಯದ ಜತೆಗೆ ಸಂಜೆ ಯೋಗಾಭ್ಯಾಸ ಪ್ರದರ್ಶನ ಏರ್ಪಡಿಸಲಾಗುವುದು. ನೃತ್ಯ ಪಾಠವನ್ನು ಡಾ.ಕರುಣಾ ವಿಜಯೇಂದ್ರ, ನಂದಿನಿ ಈಶ್ವರ್ ಮತ್ತು ಎಂ.ಎಲ್.ಸಾಮಗ ನೀಡುವರು. ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ಕನಿಷ್ಠ ಮೂರು ವರ್ಷ ನೃತ್ಯದಲ್ಲಿ ಶಿಕ್ಷಣ ಪಡೆದಿರಬೇಕು. ಹಾಗೂ 15 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ಕಾರ್ಯಾಗಾರವು ಉಚಿತವಾಗಿದ್ದು, ಅಕಾಡೆಮಿಯಿಂದ ಶಿಬಿರಾರ್ಥಿಗಳಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗುವುದು. ಕಾರ್ಯಾಗಾರದಲ್ಲಿ ಭಾಗವಹಿಸಲು ಇಚ್ಛಿಸುವವರು ಮೇ 30ರೊಳಗೆ ಅಕಾಡೆಮಿಯ ದೂ. 080-22215072 ಅಥವಾ ಇ ಮೇಲ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.