ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅರ್ಕಾವತಿ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ

Rashmi Kasaragodu
Updated On : 31 May 2013, 12:31 pm

 ಮತ್ತೀಕೆರೆ ಜಯರಾಮ್
ಕ.ಪ್ರ. ವಾರ್ತೆ   ರಾಮನಗರ   ಮೇ 30
ಅರ್ಕಾವತಿ ನದಿ ಪಾತ್ರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಿಂದ ನಗರದ ಹೊರ ವಲಯದ ದ್ಯಾವರಸೇಗೌಡನದೊಡ್ಡಿ ಬಳಿ ನಿರ್ಮಿಸಿರುವ ಸೇತುವೆಗೆ ಅಪಾಯ ಎದುರಾಗುವ ಸಂಭವವಿದೆ.
ಅರ್ಕಾವತಿ, ಕಣ್ವ ನದಿ ಪಾತ್ರಗಳು ಸೇರಿದಂತೆ ಕಂದಾಯ ಜಮೀನಿನಲ್ಲಿ ಮರಳುಗಾರಿಕೆಗೆ ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಹೇರಿದ್ದರೂ ದಂಧೆಕೋರರು ಯಂತ್ರೋಪಕರಣಗಳನ್ನು ಬಳಸುವ ಮೂಲಕ  ಎಗ್ಗಿಲ್ಲದೆ ಮರಳು ಲೂಟಿ ಮಾಡುತ್ತಿದ್ದಾರೆ.
ರಾಮನಗರದಿಂದ ಆರೇಳು ಕಿ.ಮೀ. ಆಚೆ ಅರ್ಕಾವತಿ ಮತ್ತು ನದಿ ಪಾತ್ರದ ಜಮೀನುಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿತ್ತು. ವಿಧಾನಸಭೆ ಚುನಾವಣೆ ಸಂದರ್ಭದ ಸಡಿಲ ನೀತಿಯ ಪರಿಣಾಮ ದಂಧೆಕೋರರು ಇದೀಗ ನಗರದಂಚಿನ ಮರಳು ಲೂಟಿಗೆ ಇಳಿದಿದ್ದಾರೆ.  
ಸೇತುವೆಗೆ ಸಂಚಕಾರ: ರಾಮನಗರದಿಂದ ಮಂಚನಬೆಲೆಗೆ 2 ರಸ್ತೆಗಳಲ್ಲಿ ಸಾಗಬಹುದು. ಈ ಪೈಕಿ ದ್ಯಾವರಸೇಗೌಡನದೊಡ್ಡಿ ಬಳಿ ನಿರ್ಮಿಸಿರುವ ಸೇತುವೆ ಮೇಲೆ ಹಾದು ಹೋಗುವ ಮಾರ್ಗವೂ ಒಂದಾಗಿದೆ. ಈ ಸೇತುವೆಯನ್ನು ಆರು ವರ್ಷದ ಹಿಂದೆ, ಅಂದರೆ 2007ರಲ್ಲಿ ರು.1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.  ಅರ್ಕಾವತಿ ನದಿಗೆ ಅಡ್ಡಲಾಗಿ 64.50 ಮೀಟರ್ ಉದ್ದ ನಿರ್ಮಿಸಿರುವ ಸೇತುವೆ ಸಾರ್ವಜನಿಕರಿಗೆ ಬಹು ಉಪಯುಕ್ತವಾಗಿದೆ. ಯಂತ್ರೋಪಕರಣಗಳ ಬಳಕೆಯೊಂದಿಗೆ ನಡೆಸಲಾಗುತ್ತಿರುವ ಮರಳು ಲೂಟಿಯು ಇನ್ನೇನು ಸೇತುವೆಯನ್ನು ಸಮೀಪಿಸುತ್ತಿದೆ.  ಸೇತುವೆ ಆಸುಪಾಸಿನಲ್ಲಿ ಈಗಾಗಲೇ 25 ಅಡಿಗಿಂತ ಆಳಕ್ಕೆ ಮರಳು ಬಗೆಯಲಾಗಿದೆ. ಹೀಗೇ ಬಿಟ್ಟರೆ ಮರಳುದಂಧೆಕೋರರು ಅಕ್ರಮ ಮರಳುಗಾರಿಕೆಗಾಗಿ ಸೇತುವೆ ಬುಡಕ್ಕೆ ಜೆಸಿಬಿ ತಂದು ನಿಲ್ಲಿಸಲು ಇನ್ನು 8-10 ದಿನಗಳಷ್ಟೇ ಸಾಕು.
ಅತ್ಯುತ್ತಮ ಮರಳು: ಸೇತುವೆ ಸಮೀಪದಲ್ಲಿರುವ ಮರಳು ನಾಲ್ಕಾರು ದಶಕದಿಂದ ಬಂದು ಶೇಖರಣೆಯಾಗಿದೆ. ಇದಕ್ಕೆ  ಮರಳು ಬಗೆಯುವ ಜೆಸಿಬಿ ಯಂತ್ರಕ್ಕೆ ಆಳಕ್ಕೆ ಹೋದಂತೆಲ್ಲಾ ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದು ಹುದುಗಿ ಹೋಗಿರುವ ಮರದ ದಿಮ್ಮಿಗಳು ಸಿಲುಕಿಕೊಳ್ಳುತ್ತಿರುವುದೇ ಸಾಕ್ಷಿ.
ಈ ಜಿಲ್ಲೆಯ ಇತರೆಡೆ ಸಿಗುತ್ತಿರುವ ಮರಳಿಗಿಂತಲೂ ಸೇತುವೆ ಸನಿಹದಲ್ಲಿ ದೋಚಲಾಗುತ್ತಿರುವ ಮರಳು ಉತ್ತಮ ಗುಣಮಟ್ಟದ್ದಾಗಿದೆ. ಇದಕ್ಕೆ ದುಬಾರಿ ಬೆಲೆಯೂ ಸಿಗುತ್ತಿದೆ. ಹೀಗಾಗಿ ಅಹೋರಾತ್ರಿ ಮರಳು ಬಗೆಯುವ ಕೆಲಸ ಸಾಗಿದೆ.
ಕೂಗಳತೆ ದೂರದಲ್ಲಿ: ಮರಳುಗಾರಿಕೆ ನಡೆಯುತ್ತಿರುವ ಸ್ಥಳವು ಜಿಲ್ಲಾಡಳಿತ ಕಚೇರಿ ಇರುವ ಕಂದಾಯ ಭವನದಿಂದ ಕೂಗಳತೆ ದೂರದಲ್ಲಿದೆ. ಕಚೇರಿಗೂ ದ್ಯಾವರಸೇಗೌಡನದೊಡ್‌ಡಿ ಬಳಿಯ ಸೇತುವೆಗೂ ಗರಿಷ್‌ಠ 1 ಕಿ.ಮೀ. ಮಾತ್ರವೇ ಅಂತರ. ಇಷ್ಟಾಗಿಯೂ ಮರಳು ಲೂಟಿ ತಡೆಗೆ ಕಡಿವಾಣ ಬಿದ್ದಿಲ್ಲ. ಸಂಘಟನೆಗಳು, ಸಾರ್ವಜನಿಕರಿಂದ ಆರೋಪ ಮತ್ತು ಮಾಧ್ಯಮಗಳಲ್ಲಿ ವರದಿಯಾದಾಗೆಲ್ಲಾ ತೋರ್ಪಡಿಕೆಗೆ ದಾಳಿ ನಡೆಸುವ ಅಧಿಕಾರಿ ವರ್ಗವು ಒಳಗಿಂದೊಳಗೆ ಮರಳು ಮಾಫಿಯಾಕ್ಕೆ ರಹದಾರಿ  ಮಾಡಿಕೊಡುತ್ತಿದೆ ಎನ್ನುವ ಆರೋಪ ವ್ಯಾಪಕವಾಗಿದೆ.
ಹಾಳಾದ ಬಾವಿಗಳು: ಅರ್ಕಾವತಿ ನದಿ ಪಾತ್ರದುದ್ದಕ್ಕೂ ಅಲ್ಲಲ್ಲಿ ರೈತರು ಬಳೆ ಬಾವಿಗಳನ್ನು ನಿರ್ಮಿಸಿಕೊಂಡು, ಅಷ್ಟಿಷ್ಟು ಲಭ್ಯವಿರುವ ನೀರು ಸರಬರಾಜು ಮಾಡಿಕೊಳ್ಳುತ್ತಿದ್ದಾರೆ. ಮರಳುಗಾರಿಕೆಯ ಉಪಟಳದಿಂದ ಬಹುತೇಕ ಬಾವಿಗಳು ಹಾಳಾಗಿವೆ.
ಮರಳುಗಾರಿಕೆಯಿಂದ ಶಿಥಿಲಗೊಂಡ ಬಾವಿಗಳನ್ನು ರೈತರು ಸ್ವಂತ ಖರ್ಚಿನಲ್ಲಿ ಪುನರ್ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಮರಳುಗಾರಿಕೆ ಪರಿಣಾಮ ಜಲ ಮೂಲವೇ ಬತ್ತಿ ಹೋಗುತ್ತಿದ್ದು, ಬಾವಿಗಳು ನಿಷ್ಪ್ರಯೋಜಕವಾಗುತ್ತಿವೆ.
ಪ್ರಭಾವಿಗಳ ಶಾಮೀಲು: ರಾಮನಗರ ಜಿಲ್ಲೆಯಲ್ಲಿ ಮರಳು ಮಾಫಿಯಾದಲ್ಲಿ ತೊಡಗಿಸಿಕೊಂಡ ಬಹುಪಾಲು ಮಂದಿ ಪ್ರಭಾವಿಗಳೇ ಆಗಿದ್ದಾರೆ. ಈ ದಂಧೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು, ಕೆಲ ಅಧಿಕಾರಿಗಳು ಶಾಮೀಲಾಗಿದ್ದಾರೆ. ಹೀಗಾಗಿಯೇ ಅಕ್ರಮ ಮರಳುಗಾರಿಕೆಗೆ ಕಡಿವಾಣ ಬಿದ್ದಿಲ್ಲ.
ಮರಳು ದಂಧೆಗೆ ಭೂಗತ ಪಾತಕಿಗಳ ಬೆಂಬಲವೂ ಇದೆ. ಅಲ್ಲೊಂದು ಇಲ್ಲೊಂದು ಕಡೆ ಅಧಿಕಾರಿಗಳು ದಾಳಿಗೆ ತೆರಳಿದ ಹಿಮ್ಮೆಟ್ಟಿಸಿದ ಮತ್ತು ಅವರ ವಾಹನಗಳನ್ನು ಹಾನಿಗೊಳಿಸಿದ ನಿದರ್ಶನಗಳಿವೆ. ದಿನದಿಂದ ದಿನಕ್ಕೆ ಮರಳುಗಾರಿಕೆಯು ಅಪಾಯಕಾರಿ ಆಗುತ್ತಿದೆ.
ಟೋಲ್ ಸಂಗ್ರಹ: ಮರಳು ಸಾಗಣೆ ಟಿಪ್ಪರ್, ಟ್ರ್ಯಾಕ್ಟರ್, ಲಾರಿಗಳು ಸಾಗುವ ಮಾರ್ಗದಲ್ಲಿ ಗ್ರಾಮಸ್ಥರೇ ಟೋಲ್ ಸಂಗ್ರಹ ಮಾಡಿಕೊಳ್ಳುತ್ತಿದ್ದಾರೆ. ಗ್ರಾಮದ ಅಭಿವೃದ್ಧಿ ಕೆಲಸ, ದೇಗುಲ ಇಲ್ಲವೇ ಸಂಸ್ಥೆಗಳ ಹೆಸರಿನಲ್ಲಿ ಅಕ್ರಮ ಸುಂಕ ವಸೂಲಾತಿಯೂ ನಡೆಯುತ್ತಿದೆ. ಮರಳು ಸಾಗಣೆ ವಾಹನಗಳು ಸಾಕಷ್ಟು ಕಡೆ ಖಾಸಗಿ ಜಮೀನಿನಲ್ಲಿ ಸಾಗುತ್ತವೆ. ಅಂತಹ ಕಡೆ ಜಮೀನು ಮಾಲೀಕರೂ ಪ್ರತಿ ಲೋಡ್ ಆಧರಿಸಿ ನೆಲ ಬಾಡಿಗೆ ವಸೂಲು ಮಾಡುತ್ತಿದ್ದಾರೆ. ಸರ್ಕಾರಿ ವ್ಯವಸ್ಥೆಗೆ ಲಂಚದ ಪಾಲು ಇದ್ದೇ ಇದೆ. ಹೀಗಿರುವ ವ್ಯವಸ್ಥೆಗೆ ಕೊನೆ ಇಲ್ಲದಂತಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement