ಇಎಸ್‌ಐ ಆಸ್ಪತ್ರೆಯಲ್ಲಿ ಸ್ವಚ್ಛತೆ ಅಗತ್ಯ: ಶಾಸಕ ಶಿವಣ್ಣ
ಆನೇಕಲ್ಲು: ಸ್ವಚ್ಛತೆಗೆ ಆದ್ಯತೆ ನೀಡಿ ಆರೋಗ್ಯವನ್ನು ಕಾಪಾಡಬೇಕಾದ ಸರ್ಕಾರಿ ಇಎಸ್‌ಐ ಆಸ್ಪತ್ರೆ ಆವರಣ ಕೊಳಕು ಗುಂಡಿಯಾಗಿರುವುದು ಶೋಚನೀಯ. ಈ ಕೂಡಲೇ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಕ್ರಮ ವಹಿಸಿ ಸ್ವಚ್ಛತೆಯನ್ನು ಕಾಪಾಡಬೇಕೆಂದು ನೂತನ ಶಾಸಕ ಬಿ. ಶಿವಣ್ಣ ಹೇಳಿದ್ದಾರೆ. ಅವರು ತಾಲೂಕಿನ ಪ್ರತಿಷ್ಠಿತ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿರುವ ಇಎಸ್‌ಐ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿ ಸಮಾಜದ ಸ್ವಾಸ್ಥ್ಯ ಕಾಪಾಡಬೇಕಿರುವುದು ಎಲ್ಲರ ಜವಾಬ್ದಾರಿ. ಅಧಿಕಾರಿಗಳು ಪಂಚಾಯ್ತಿಯ ಮೇಲೆ ಎಲ್ಲದಕ್ಕೂ ಅವಲಂಬನೆ ಮಾಡಬಾರದು. ತಮ್ಮ ಇತಿ ಮಿತಿಯಲ್ಲಿ ಸ್ವಚ್ಛತೆಯನ್ನು ಕಾಪಾಡಿ ಇತರರಿಗೆ ಮಾದರಿಯಾಗಬೇಕೆಂದರು.
ತಾಲೂಕಿನ ಎಲ್ಲ ಅಧಿಕಾರಿಗಳ ಸಭೆ ಕರೆದು ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ, ಚರಂಡಿ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಲು ಸೂಚನೆ ನೀಡಲಾಗುವುದು. ರಾಜ್ಯದ ಕೆಲ ಜಿಲ್ಲೆ ಗಳಲ್ಲಿ ಡೆಂಘೀ ರೀತಿಯ ಮಾರಕ ರೋಗಗಳು ಕಾಣಿಸಿದ್ದು ಪ್ರಾರಂಭದಲ್ಲೇ ಮುನ್ನೆಚ್ಚರಿಕೆ ವಹಿಸಬೇಕೆಂದು ಮ ನವಿ ಮಾಡಿದರು.
ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭಾನುಪ್ರತಾಪ್ ಮಾತನಾಡಿ ಸಹಸ್ರಾರು ನೌಕರರಿರುವ ಈ ಕ್ಷೇತ್ರದಲ್ಲಿ ಇಎಸ್‌ಐ ಉತ್ತಮ ಚಿಕಿತ್ಸೆ ಹಾಗೂ ಔಷಧಗಳನ್ನು ಹೊಂದಿರಬೇಕು. ತಜ್ಞ ವೈದ್ಯರ ಅವಶ್ಯಕತೆ ಇದ್ದು ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಕ್ರಮ ವಹಿಸಬೇಕೆಂದರು.
ಮುಖಂಡರಾದ ಚಂದ್ರಪ್ಪ, ಲಿಂಗಣ್ಣ, ಸತ್ಯನಾರಾಯಣ, ಶ್ರೀನಿವಾಸ್, ಮಂಜು, ಸಂಪತ್‌ಕುಮಾರ್ ಇದ್ದರು.