ಕಾಮಗಾರಿ ಮರು ಶಂಕುಸ್ಥಾಪನೆಗೆ ವಿರೋಧ
ಹೊಸಕೋಟೆ: ಪಟ್ಟಣದ ಜಿಕೆಬಿಎಂಎಸ್ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ನಾಗರಾಜ್ ಮರು ಶಂಕುಸ್ಥಾಪನೆ ಮಾಡಿರುವುದು ಸರಿಯಿಲ್ಲ ಎಂದು ಯೋಜನಾ ಪ್ರಾಧಿಕಾರದ ಸದಸ್ಯ ವಿ.ವಿಜಯ ಕುಮಾರ್ ತಿಳಿಸಿದರು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನಾ ಪ್ರಾಧಿಕಾರಿ ಶಾಲಾ ಕಟ್ಟಡ ನಿರ್ಮಾಣಕ್ಕೆ 68 ಲಕ್ಷ ರು. ಮಂಜೂರು ಮಾಡಿದ್ದು, 2013ರ ಜ.9ರಂದು ಮಾಜಿ ಸಚಿವರುಗಳಾದ ಸುರೇಶ್ ಕುಮಾರ್ , ಬಿ.ಎನ್. ಬಚ್ಚೇಗೌಡ ಶಂಕುಸ್ಥಾಪನೆ ನೆರವೇರಿಸಿದ್ದರು. ನಂತರ ಚುನಾವಣೆಗೆ ಮೊದಲೆ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡಿದ್ದರೂ ಅನಾವಶ್ಯಕವಾಗಿ ಕಾಮಗಾರಿಯನ್ನು ನಿಲುಗಡೆ ಮಾಡಿದ್ದೇ ಅಲ್ಲದೆ ಮತ್ತೊಮ್ಮೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ದೂರಿದರು. ಯೋಜನಾ ಪ್ರಾಧಿಕಾರದ ಸದಸ್ಯ ಎಂಜಿನಿಯರ್ ನಾರಾಯಣಸ್ವಾಮಿ, ಗ್ರಾಮಂತರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆರ್.ಮುನಿನಂಜಪ್ಪ ಉಪಸ್ಥಿತರಿದ್ದರು.