ಖಾಸಗಿ ಬಸ್ ಟರ್ಮಿನಲ್‌ಗೆ ಮತ್ತೊಮ್ಮೆ ಶಂಕುಸ್ಥಾಪನೆ ಭಾಗ್ಯ!
ಕ.ಪ್ರ. ವಾರ್ತೆ ಚನ್ನಪಟ್ಟಣ ಮೇ 30
ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಶಂಕುಸ್ಥಾಪನೆ ನೆರವೇರಿಸಿದ್ದ ಇಲ್ಲಿನ ಖಾಸಗಿ ಬಸ್ ಟರ್ಮಿನಲ್‌ಗೆ ಮತ್ತೆ ನಗರಾಭಿವೃದ್ಧಿ ಪ್ರಾಧಿಕಾರ ಶಂಕುಸ್ಥಾಪನೆ ಮಾಡಲು ಮುಂದಾಗಿದೆ.
ಕಳೆದ ವರ್ಷ ನವೆಂಬರ್ 23ರಂದು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅಂದಿನ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಚಾಲನೆ ಗೊಳಿಸಿ ಹಲವಾರು ಕಾಮಗಾರಿಗಳಲ್ಲಿ ಖಾಸಗಿ ಬಸ್ ನಿಲ್ದಾಣವೂ ಸೇರಿದ್ದು ಇದೀಗ ಮತ್ತೆ ಶಂಕುಸ್ಥಾಪನೆ ನಡೆಯುತ್ತಿದೆ.
ಮುಖ್ಯ ಮಂತ್ರಿಗಳ ಸಮ್ಮುಖದಲ್ಲಿ ಮಾತನಾಡಿದ ಅಂದಿನ ಅರಣ್ಯ ಸಚಿವ ಈ ಕ್ಷೇತ್ರದ ಇಂದಿನ ಶಾಸಕರಾದ ಯೋಗೇಶ್ವರ್ ಈ ಬಸ್ ನಿಲ್ದಾಣದಲ್ಲಿ ಇದೇ ಕೊನೆಯ ಕಾರ್ಯಕ್ರಮವಾಗಿದ್ದು ಸದ್ಯದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದಿದ್ದರು ಆದರೆ ಇದೀಗ ಪ್ರಾಧಿಕಾರ ಮತ್ತೆ ಶಂಕು ಸ್ಥಾಪನೆ ಮಾಡಲು ಮುಂದಾಗಿರುವುದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ.
ಅನುಮತಿಯೇ ದೊರೆತಿರಲಿಲ್ಲ: 32 ಕೋಟಿ ರು. ವೆಚ್ಚದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ರಾಮನಗರ ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರ ಸಲ್ಲಿಸಿದ್ದ ಪ್ರಸ್ಥಾವನೆಗೆ 2 ವರ್ಷಗಳ ಹಿಂದೆಯೇ ನಗರಸಭೆ ಸಾಮಾನ್ಯ ಸಭೆ ಅನುಮೋದನೆ ನೀಡಿತ್ತು. ಅಲ್ಲಿಂದ ಕುಂಟುತ್ತಾ ಸಾಗಿದ ನಿರ್ಮಾಣಕಾರ್ಯಕ್ಕೆ ಪ್ರಮುಖ ಅಡಚಣೆಯಾಗಿದ್ದು ಸ್ಥಳದ ಹಸ್ತಾಂತರ, ನಗರಸಭೆ ಒಡೆತನಕ್ಕೆ ಸೇರಿದ್ದ ಖಾಸಗಿ ಬಸ್ ನಿಲ್ದಾಣವನ್ನು ಇದುವರೆಗೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡದ ಕಾರಣ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಗುರುವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಸೂಚನೆಮೇರೆಗೆ ನಗರಸಭೆ ಕಾಮಗಾರಿ ಆರಂಭಿಸಲು ಪ್ರಾಧಿಕಾರಕ್ಕೆ ಅನುಮತಿ ನೀಡಿರುವುದಾಗಿ ತಿಳಿದು ಬಂದಿದೆ.
ಇಷ್ಟೊಂದು ತರಾತುರಿಯಲ್ಲಿ ಕಾರ್ಯಕ್ರಮ ನಡೆಸುವ ಔಚಿತ್ಯವೇನು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಯೋಗೇಶ್ವರ್ ಕರಪತ್ರ: ಖಾಸಗಿ ಬಸ್ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮವನ್ನು ನಗರಾಭಿವೃದ್ಧಿ ಪ್ರಾಧಿಕಾರ ಹಮ್ಮಿ ಕೊಂಡಿದೆಯಾದರೂ ಇದುವರೆಗೆ ಅಧಿಕೃತ ಆಹ್ವಾನ ಪತ್ರಿಕೆ ಎಲ್ಲೂ ಸಿಕ್ಕಿಲ್ಲ.
ಮಾಧ್ಯಮ ಪ್ರತಿನಿಧಿಗಳಿಗೆ ಕೆಲ ಗಣ್ಯರಿಗೆ ಸರ್ಕಾರಿ ಆಹ್ವಾನ ಪತ್ರಿಕೆ ತಲುಪದಿದ್ದು, ತಾಲೂಕಿನ ಜನತೆಗೆ ತಲುಪಿರುವುದು ಯೋಗೇಶ್ವರ್ ತಮ್ಮ ಬ್ಯಾನರ್‌ನಲ್ಲಿ ಮುದ್ರಿಸಿರುವ ಕರಪತ್ರ ಮಾತ್ರ.
ನಗರಸಭಾ ಸದಸ್ಯರ ತಕರಾರು: ನಗರಸಭಾ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೆ ಖಾಸಗಿ ಬಸ್ ಟರ್ಮಿನಲ್ ಉದ್ಘಾಟನೆಗೆ ಮುಂದಾಗಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ನಗರಸಭಾ ಸದಸ್ಯರು ಕಾರ್ಯಕ್ರಮವನ್ನು ತಡೆಹಿಡಿಯುವಂತೆ ಆಗ್ರಹಿಸಿದ್ದಾರೆ.
ಈಬಗ್ಗೆ ಜಿಲ್ಲಾಧಿಕಾರಿಗಳು, ನಗರಸಭಾ ಸದಸ್ಯರಿಗೆ ಪತ್ರ ಬರೆದಿರುವ ನಗರಸಭಾ ಸದಸ್ಯರು ಹಿಂದಿನ ಅಧ್ಯಕ್ಷರು ಮತ್ತು ಅಧಿಕಾರಿಗಳು ಒಡಂಬಡಿಕೆ ಮಾಡಿಕೊಂಡು ಪ್ರಾಧಿಕಾರಕ್ಕೆ ಲಾಭ ಮಾಡಿ ಕೊಡುವ ಉದ್ದೇಶದಿಂದ ನಗರಸಭೆಗೆ ನಷ್ಟ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ನಗರಸಭಾ ಸದಸ್ಯರನ್ನು ಅವಗಣಿಸಿ ನಡೆಸುತ್ತಿರುವ ಈಕಾರ್ಯಕ್ರಮವನ್ನು ರದ್ದು ಪಡಿಸದಿದ್ದರೆ ಕಾರ್ಯಕ್ರಮದಲ್ಲಿ ಪ್ರತಿಭಟನೆ ನಡೆಸುವುದಾಗಿ ನಗರಸಭಾ ಸದಸ್ಯರಾದ ಜಭಿಉಲ್ಲಾಖಾನ್ ಘೋರಿ, ಉಮಾಶಂಕರ್, ವಿಷಕಂಠಮೂರ್ತೀ, ಕಿರಣ್, ರಮೇಶ್ ಬಾಬು ಮುಂತಾದವರು ಎಚ್ಚರಿಸಿದ್ದಾರೆ.
2 ವರ್ಷದಲ್ಲಿ ಲೋಕಾರ್ಪಣೆ : ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿತೇ ಶಂಕುಸ್ಥಾಪನೆಯಾಗಬೇಕಿದ್ದ ಸುಮಾರು 32 ಕೋಟಿ ವೆಚ್ಚದ ಖಾಸಗಿ ಬಸ್ ನಿಲ್ದಾಣ ಕೆಲಸ ಹಲವು ಕಾರಣಗಳಿಂದ ವಿಳಂಬವಾಗಿದ್ದು ಗುರುವಾರ ಚಾಲನೆ ನೀಡಲು ಗೃಹ ಸಚಿವರೂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಾರ್ಜ್ ಹಾಗೂ ನಗರಾಭಿವೃದ್ಧಿ ಸಚಿವರೂ ಸಹ ತಾಲೂಕಿಗೆ ಆಗಮಿಸಲಿದ್ದಾರೆ ಎಂದು ಶಾಸಕ ಯೋಗೇಶ್ವರ್ ತಿಳಿಸಿದ್ದಾರೆ.
ತಾಲೂಕಿನಲ್ಲಿ ಮಾತ್ರವಲ್ಲದೇ ಸುಸಜ್ಜಿತ ಹಾಗೂ ಆಧುನಿಕ ಖಾಸಗಿ ಬಸ್ ನಿಲ್ದಾಣ ನಿರ್ಮಾಣಗೊಳ್ಳಲಿದು ಶಂಕು ಸ್ಥಾಪನೆಯಾದ 2 ವರ್ಷದಲ್ಲಿ ಇದು ಪೂರ್ಣಗೊಂಡು ಲೋಕಾರ್ಪಣೆಗೊಳಲಿದೆ ಎಂದಿದ್ದಾರೆ.
ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ನಗರಸಭೆಯಿಂದ ಕಾಮಗಾರಿ ಆರಂಭಿಸಲು ಅನುಮತಿ ನೀಡಲಾಗಿದೆ. ಖಾಸಗಿ ಬಸ್ ಟರ್ಮಿನಲ್ ನಿರ್ಮಾಣ ವೆಚ್ಚವನ್ನು ಪ್ರಾಧಿಕಾರ ನೋಡಿ ಕೊಳ್ಳಲಿದ್ದು ಕಟ್ಟಡ ನಿರ್ಮಾಣ ಗೊಂಡ ಬಳಿಕ ಸರ್ಕಾರದ ಸೂಚನೆಯ ಮೇರೆಗೆ ನಗರಸಭೆ ಮತ್ತು ಪ್ರಾಧಿಕಾರಕ್ಕೆ ಆದಾಯ ಹಂಚಿಕೆಯಾಗಲಿದೆ.
ಟಿ ಪದ್ಮನಾಭ, ಪೌರಾಯುಕ್ತ
ಜಿಲ್ಲಾಧಿಕಾರಿಗಳ ಸೂಚನೆಯಂತೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಗರ ಸಭೆಗೆ ಜಿಲ್ಲಾಧಿಕಾರಿ ಆಡಳಿತಾಧಿಕಾರಿಯಾಗಿದ್ದು ನಗರಸಭಾ ಸದಸ್ಯರನ್ನು ಕಡೆಗಣಿಸಿರುವ ಪ್ರಶ್ನೆಯೇ ಇಲ್ಲ, ಗುರುವಾರ ಬೆಳಿಗ್ಗೆ ನಗರಸಭೆಯಿಂದ ಅನುಮತಿ ದೊರೆತಿದ್ದು ಜಿಲ್ಲಾ ಉಸ್ತುವಾರಿ ಸಚಿವರ ದಿನಾಂಕ ನಿಗದಿ ಪಡಿಸಿಕೊಂಡು ಉದ್ಘಾಟನಾ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ. ಯಾವುದೇ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿಲ್ಲ.
ಟಿ ಚಿದಾನಂದ್, ಆಯುಕ್ತರು ನಗರಾಭಿವೃದ್ಧಿ ಪ್ರಾಧಿಕಾರ