ತಮಿಳುನಾಡು ಸಿಎಂ ಜಯಾ ವಿರುದ್ಧ ಆಕ್ರೋಶ
ಕ.ಪ್ರ. ವಾರ್ತೆ ಟಿ ರಾಮನಗರ ಟಿ ಮೇ 30
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಬೆಳೆ ನಷ್ಟ ಪರಿಹಾರವಾಗಿ ಕರ್ನಾಟಕ ಸರ್ಕಾರ ನೀರು ಮತ್ತು ಹಣ ನೀಡಬೇಕೆಂದು ಸುಪ್ರೀಂ ಮೆಟ್ಟಿಲೇರಿರುವುದನ್ನು ವಿರೋಧಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಐಜೂರು ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಜಯಲಲಿತಾ, ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕವು ಸರಿಯಾದ ಸಮಯದಲ್ಲಿ ನೀರು ಹರಿಸದ ಕಾರಣ ತಮಿಳುನಾಡಿನ ರೈತರಿಗೆ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟ ಉಂಟಾಗಿದೆ. ಆದ್ದರಿಂದ ಕರ್ನಾಟಕ ಸರ್ಕಾರವು ರು. 2480 ಕೋಟಿ ಪರಿಹಾರ ನೀಡುವುದಲ್ಲದೆ ತಕ್ಷಣವೇ 53 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಹೊಸ ಕ್ಯಾತೆ ತೆಗೆದಿರುವುದಕ್ಕೆ ಪ್ರತಿಭಟನಾ ನಿರತರು ಆಕ್ಷೇಪ ವ್ಯಕ್ತಪಡಿಸಿದರು.
ಕುಡಿವ ನೀರಿಗೆ ಹಾಹಾಕಾರ: ಕರ್ನಾಟಕದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ರಾಜ್ಯದ ಎಲ್ಲಾ ಜಲಾಶಯಗಳು ಬರಿದಾಗಿವೆ. ಇದನ್ನು ಕೇಂದ್ರವೂ ಕೂಡ ಖಚಿತಪಡಿಸಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ 53 ಟಿಎಂಸಿ ನೀರು ಹರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಜಯಲಲಿತಾ ಪದೇ ಪದೇ ಕರ್ನಾಟಕದ ಮೇಲೆ ಸವಾರಿ ಮಾಡುತ್ತಿದ್ದಾರೆ. ಆದರೆ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಸಮರ್ಥ ವಾದ ಮಂಡಿಸಲು ವಿಫಲವಾಗಿದೆ. ತಮಿಳುನಾಡಿನ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರವು ತಮಿಳರ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಕಿಡಿ ಕಾರಿದರು.
ಹಿಂದಿನ ಬಿಜೆಪಿ ಸರ್ಕಾರವು ಆಂತರಿಕ ಕಚ್ಚಾಟದಲ್ಲೇ ತೊಡಗಿ ಕಾವೇರಿ ವಿವಾದವನ್ನು ನಿರ್ಲಕ್ಷಿಸಿದ್ದರ ಪರಿಣಾಮವಾಗಿ ಇಂದು ಕುಡಿಯಲು ನೀರಿಲ್ಲದಂತಹ ಪರಿಸ್ಥಿತಿ ತಲೆದೋರಿದೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರವೂ ಕೂಡ ಇದೇ ಹಾದಿಯಲ್ಲಿ ಸಾಗಿದ್ದು, ಜಯಲಲಿತಾ ಕನ್ನಡಿಗರ ಮೇಲೆ ಸವಾರಿ ಮಾಡುತ್ತಿರುವುದನ್ನು ತಪ್ಪಿಸಲು ಆಗದಿದ್ದಲ್ಲಿ ಕೈಗೆ ಬಳೆ ತೊಟ್ಟು, ಹಣೆಗೆ ಹರಿಶಿನ ಕುಂಕುಮ ಹಚ್ಚಿಕೊಂಡು, ತಲೆಗೆ ಹೂ ಮುಡಿದುಕೊಳ್ಳಬೇಕು ಎಂದು ಛೇಡಿಸಿದರು.
ವಿರೋಧಿಸಬೇಕು: ಜಯಲಲಿತಾಳ ಈ ದಾರ್ಷ್ಟ್ಯತನವನ್ನು ಕಟುವಾಗಿ ವಿರೋಧಿಸಬೇಕು. ರಾಜ್ಯವು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲು ನಿಯೋಗ ತೆರಳಬೇಕು. ಜನ ಜಾನವಾರುಗಳಿಗೆ ಕುಡಿಯಲು ನೀರಿಲ್ಲದಿರುವುದನ್ನು ಸುಪ್ರೀಂ ಕೋರ್ಟ್ಗೆ ಸಮರ್ಪಕ ವಾದದ ಮೂಲಕ ತಿಳಿಸಿ, ಕಾನೂನು ಹೋರಾಟ ನಡೆಸಿ ಜಯಲಲಿತಾಳಿಗೆ ತಕ್ಕ ಉತ್ತರ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ತಮಿಳುನಾಡಿನ ಯಾವುದೇ ಒತ್ತಡಕ್ಕೆ ಮಣಿಯದೆ ಕರ್ನಾಟಕದ ಹಿತವನ್ನ ಕಾಪಡಬೇಕೆಂದು ಆಗ್ರಹಿಸಿದರು. ಜಯಲಲಿತಾ ಕ್ಯಾತೆಗಳಿಗೆ ಕರ್ನಾಟಕ ತಕ್ಕ ಉತ್ತರ ನೀಡಲು ವಿಫಲವಾದಲ್ಲಿ ವೇದಿಕೆಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ, ಮಂಗಳಮ್ಮ, ಲಕ್ಷ್ಮಮ್ಮ, ನಾಗರತ್ನ, ಯೋಗೇಶ್ಗೌಡ, ರಂಜಿತ್ಗೌಡ, ಶಂಕರ, ಸ್ವಾಮಿ, ಉಮೇಶ್, ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.