ದೇವನಹಳ್ಳಿ ಕೈಗಾರಿಕಾ ಕೇಂದ್ರದಲ್ಲಿ ಹೊಲಿಗೆ ಯಂತ್ರ ವಿತರಣೆ
ದೇವನಹಳ್ಳಿ: ಇಲ್ಲಿನ ಕೈಗಾರಿಕಾ ಇಲಾಖೆ ಕಚೇರಿಯಲ್ಲಿ ಜಿಲ್ಲಾ ಪಂಚಾಯಿತಿಯಿಂದ ಮಂಜೂರಾಗಿರುವ ಹೊಲಿಗೆ ಯಂತ್ರಗಳನ್ನು ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಎಂ.ಬೀರಪ್ಪ ಅವರು ಗುರುವಾರ ವಿತರಣೆ ಮಾಡಿದರಲ್ಲದೆ ಇಲಾಖೆಯಿಂದ ಪಡೆದಿರುವ ಹೊಲಿಗೆ ಯಂತ್ರಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂದರು. ಯಾವುದೇ ಕಾರಣಕ್ಕೂ ಹೊಲಿಗೆ ಯಂತ್ರಗಳನ್ನು ಮಾರಾಟಮಾಡಬಾರದು ಎಂದರು.
ವೃತ್ತಿ ನಿರತ ಕುಶಲಕರ್ಮಿಗಳಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಉಚಿತವಾಗಿ ಉಪಕರಣಗಳನ್ನು ವಿತರಿಸುವ ಯೋಜನೆಯಾಗಿದ್ದು ಇದರಲ್ಲಿ ಬಡಗಿ, ಕಮ್ಮಾರ, ಕಲ್ಲು ಕೆಲಸ ಮಾಡುವವರು ಹಾಗೂ ಗಾರೆ ಕೆಲಸ ಮಾಡುವ 30 ಮಂದಿ ಗ್ರಾಮೀಣ ಕುಶಲ ಕರ್ಮಿಗಳಿಗೆ ತಲಾ ಐದು ಸಾವಿರು ರು. ಬೆಲೆ ಬಾಳುವ ಉಪಕರಣಗಳನ್ನು 2012-13 ನೇ ಸಾಲಿನಲ್ಲಿ ವಿತರಿಸಲಾಗುತ್ತಿದೆ ಎಂದು ಕೈಗಾರಿಕಾ ವಿಸ್ತರಣಾಧಿಕಾರಿಗಳಾದ ನಾರಾಯಣಪ್ಪ ತಿಳಿಸಿದರು. ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುನಿರಾಮಯ್ಯ ಹಾಗೂ ಕುಂದಾಣ ಹೋಬಳಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಚಂದ್ರೇಗೌಡ ಉಪಸ್ಥಿತರಿದ್ದರು.