ನಂಗಾನಾಚ್; ರೈತಸಂಘ ರಸ್ತೆ ತಡೆ
ದೊಡ್ಡಬಳ್ಳಾಪುರ: ತಾಲೂಕಿನ ಘಾಟಿ ಸುಬ್ರಹ್ಮಣ್ಯ ಸಮೀಪ ಇರುವ ಎಸ್.ಆರ್.ವ್ಯಾಲಿ ರೆಸಾರ್ಟ್‌ನಲ್ಲಿ ನಡೆದ ನಂಗಾನಾಚ್ ಪ್ರಕರಣವನ್ನು ಪಾರದರ್ಶಕ ತನಿಖೆಗೆ ಒಳಪಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಒತ್ತಾಯಿಸಿದೆ.
ಈ ಸಂಬಂಧ ರೆಸಾರ್ಟ್ ಒತ್ತುವರಿ ಮಾಡಿಕೊಂಡಿರುವ ಭೂಮಿ ತೆರವುಗೊಳಿಸಬೇಕು ಮತ್ತು ರೆಸಾರ್ಟ್‌ನಲ್ಲಿ ಬೆತ್ತಲೆ ನೃತ್ಯ ಆಯೋಜಿಸಿದ್ದ ಆಂಧ್ರಪ್ರದೇಶ ಮೂಲಕ ಜೆವಿಆರ್ ಅಗ್ರಿ ಕಂಪನಿಯ ಪರವಾನಗಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಪ್ರವಾಸಿ ಮಂದಿರ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು.
ರೈತರ ಆತ್ಮಹತ್ಯೆಗೆ ಪರೋಕ್ಷ ಕಾರಣ: ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾ ಮುಖಂಡ ಡಾ.ಸಿ.ಎಸ್.ಶ್ರೀನಿವಾಸ್, ನಂಗಾನಾಚ್ ಮತ್ತು ರೈತರ ಆತ್ಮಹತ್ಯೆಗಳಿಗೆ ನೇರ ಸಂಬಂಧ ಇದೆ. ಜೆವಿಆರ್ ಕೃಷಿ ಸಂಬಂಧಿತ ಕಂಪನಿಗಳಂತಹ ಕಂಪನಿಗಳು ಕರ್ನಾಟಕದಲ್ಲಿ ತಮ್ಮ ವಹಿವಾಟು ವಿಸ್ತರಿಸಲು ಕಳಪೆ ಬೀಜಗಳನ್ನು ರೈತರ ಮೇಲೆ ಹೇರಲು ಏಜೆಂಟರುಗಳಿಗೆ ಹೆಣ್ಣು ಮತ್ತು ಹೆಂಡದ ಆಮಿಷ ಒಡ್ಡುತ್ತಿದ್ದಾರೆ. ಇಡೀ ದೇಶದಲ್ಲಿ ಇಂತಹ ಬೀಜ ಕಂಪನಿಗಳು ರೈತರಲ್ಲಿ ಸುಮಾರು 54 ಸಾವಿರ ಕೋಟಿ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಹೀಗಾಗಿ, ರೈತರ ಆತ್ಮಹತ್ಯೆಗಳಿಗೆ ಜೆವಿಆರ್ ಬೀಜೋತ್ಪಾದನಾ ಕಂಪನಿ ಸೇರಿದಂತೆ ಅನೇಕ ಕಂಪನಿಗಳು ನಡೆಸುತ್ತಿರುವ ನಂಗಾನಾಚ್ ಪರೋಕ್ಷವಾಗಿ ಕಾರಣವಾಗಿದೆ ಎಂದು ಆರೋಪಿಸಿದರು.
ಈ ಕೂಡಲೇ ಸರ್ಕಾರ ಈ ಕಂಪನಿಯ ಪರವಾನಗಿ ರದ್ದುಗೊಳಿಸಿ ಮುಟ್ಟುಗೋಲು ಹಾಕಿಕೊಂಡು ಸೂಕ್ತ ತನಿಖೆ ನಡೆಸಲು ವಿಶೇಷ ಸಮಿತಿಯನ್ನು ರಚಿಸಬೇಕು. ಎಸ್‌ಆರ್ ವ್ಯಾಲಿ ಸೇರಿದಂತೆ ತಾಲೂಕಿನ ಇಂತಹ ಎಲ್ಲ ರೆಸಾರ್ಟ್‌ಗಳ ಭೂ ಒತ್ತುವರಿ ತನಿಖೆಗೊಳಪಡಿಸಬೇಕು. ರಾಜ್ಯದ ಎಲ್ಲ ಬೀಜೋತ್ಪಾದನೆ ಮತ್ತು ಕೃಷಿ ಕೇಂದ್ರೀಯ ಕಂಪನಿಗಳ ಮೇಲೆ ರೈತ ಮುಖಂಡರನ್ನೊಳಗೊಂಡ ಕಣ್ಗಾವಲು ಸಮಿತಿ ಆರಂಭಿಸಬೇಕು. ಪ್ರತಿ ತಾಲೂಕಿನಲ್ಲಿ 15 ದಿನಕ್ಕೊಮ್ಮೆ ಕೃಷಿ ಅಧಿಕಾರಿಗಳು, ತೋಟಗಾರಿಕೆ ಅಧಿಕಾರಿಗಳು, ದಲ್ಲಾಳಿಗಳು, ವರ್ತಕರು, ರೈತ ಮುಖಂಡರ ಸಭೆ ನಡೆಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ನಾಗಸಂದ್ರ ಪ್ರಸನ್ನ ಮಾತನಾಡಿ, ತಾಲೂಕಿನ ಎಸ್‌ಆರ್ ವ್ಯಾಲಿ ಸೇರಿದಂತೆ ಅನೇಕ ರೆಸಾರ್ಟ್‌ಗಳು ಅರಣ್ಯವಲಯ ಮತ್ತು ಕಂದಾಯ ಇಲಾಖೆಗೆ ಸೇರಿದ ಗೋಮಾಳದ ಭೂಮಿಗಳನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದಾರೆ. ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಯಬೇಕು ಎಂದು ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಆಗ್ರಹಿಸಿದರು.