ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬೊಂಬೆನಗರಿ ಸಮಗ್ರ ಅಭಿವೃದ್ಧಿಗೆ ಬದ್ಧ: ಯೋಗೇಶ್ವರ್

Rashmi Kasaragodu
Updated On : 1 Jun 2013, 12:44 pm

ಚನ್ನಪಟ್ಟಣ: ಬೊಂಬೆನಗರಿಯನ್ನು ಸಮಗ್ರ ಅಭಿವೃದ್ಧಿ ಪಡಿಸ ಬೇಕೆಂಬುದು ನನ್ನ ಬಹುದಿನದ ಕನಸು ನನಸಾಗಿದ್ದು, ಇದೀಗ ಅದು ನೆರವೇರುತ್ತಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಅಭಿಪ್ರಾಯಪಟ್ಟರು.
ಪಟ್ಟಣದ ಖಾಸಗಿ ಬಸ್ ಟರ್ಮಿನಲ್‌ನ ಗುದ್ದಲಿಪೂಜೆ ಸಮಾರಂಭವನ್ನು ನೆರವೇರಿಸಿ ಮಾತನಾಡಿ, ತಾಲೂಕಿನ ಜನತೆ ನನಗೆ ರಾಜಕೀಯವಾಗಿ ಶಕ್ತಿ ತುಂಬಿದ್ದು, ಆ ಶಕ್ತಿಯನ್ನು ತಾಲೂಕಿನ ಅಭಿವೃದ್ಧಿಗೆ ಸದ್ವಿನಿಯೋಗ ಮಾಡಿಕೊಳ್ಳುವುದಾಗಿ ತಿಳಿಸಿದರು.
ಹೆಚ್ಚಿನ ವೆಚ್ಚದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಖಾಸಗಿ ಬಸ್‌ನಿಲ್ದಾಣದ ನಿರ್ಮಾಣ ಕಾರ್ಯ ಇನ್ನೆರಡು ವರ್ಷದಲ್ಲಿ ಪೂರ್ಣಗೊಳ್ಳಲಿದ್ದು, ಬೆಂ-ಮೈ ಹೆದ್ದಾರಿಯಲ್ಲಿ ಸುಸಜ್ಜಿತ ಕಟ್ಟಡ ಇದಾಗಿದೆ ಎಂದರು.
ಈ ಕಟ್ಟಡದ ಬೇಸ್‌ಮೆಂಟ್‌ನ ಮೂರು ಪ್ಲೋರ್‌ಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದ್ದು, ನೆಲಮಹಡಿಯಲ್ಲಿ ಖಾಸಗಿ ಬಸ್‌ನಿಲ್ದಾಣ, ಒಂದರಿಂದ ಮೂರನೇ ಮಹಡಿಯ ವರೆಗೆ ವಾಣಿಜ್ಯ ಮಳಿಗೆಗಳು, ನಾಲ್ಕರಿಂದ 6 ನೇ ಮಳಿಗೆ ವರೆಗೆ ಮಲ್ಟಿಫೆಕ್ಸ್ ಚಿತ್ರಮಂದಿರ, 7 ಮತ್ತು 8 ನೇ ಮಳಿಗೆಯಲ್ಲಿ ಟೆರೆಸ್ ರೆಸ್ಟೋರೆಂಟ್ ನಿರ್ಮಿಸುವುದಾಗಿ ವಿವರಿಸಿದರು.
ಸಿಎಂ ನಿರ್ದೇಶನ: ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮ ರದ್ದು ಪಡಿಸಲಾಗಿತ್ತಾದರೂ ಸದನದಲ್ಲಿ ಮುಖ್ಯಮಂತ್ರಿ ಅವರನ್ನು ಕಂಡು ಮಾತನಾಡಿದಾಗ ಅವರು ಅನುಮತಿ ನೀಡಿದರು ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಕಾರ್ಯಕ್ರಮ ಆಯೋಜಿಸಿರುವುದಾಗಿ ಯೋಗೇಶ್ವರ್ ತಿಳಿಸಿದರು.
ಶಂಕುಸ್ಥಾಪನೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರು ನೆರವೇರಿಸ ಬೇಕಿತ್ತಾದರೂ ಕೆಲಸದ ಒತ್ತಡದಿಂದ ಅವರು ಬರಲಾಗಲಿಲ್ಲ, ಮುಂದಿನ ದಿನಗಳಲ್ಲಿ ನಾನು ಪಾಲ್ಗೊಳ್ಳತ್ತೇನೆ ಅಭಿವೃದ್ಧಿ ಕೆಲಸಗಳು ನಿಲ್ಲುವುದು ಬೇಡ ನೀವೆ ಶಂಕುಸ್ಥಾಪನೆ ನೆರವೇರಿಸಿ ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ವಿಶೇಷ ಪ್ಯಾಕೇಜ್: ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ತಾಲೂಕಿಗೆ ಅಗತ್ಯವಿರುವ ಯೋಜನೆಗಳನ್ನು ಮಂಜೂರು ಮಾಡಿಸುವುದಾಗಿ ತಿಳಿಸಿದ ಯೋಗೇಶ್ವರ್ ತಾಲೂಕಿನ ಅಭಿವೃದ್ಧಿಗೆ ಸರ್ಕಾರದಿಂದ ವಿಶೇಷ ಪ್ಯಾಕೇಜ್  
ತರುವುದಾಗಿ ತಿಳಿಸಿದರು.
ಅಭಿವೃದ್ಧಿಗೆ ವಿರೋಧ ಬೇಡ: ನಗರಸಭಾ ಸದಸ್ಯರು ಈ ಕಾರ್ಯಕ್ರಮದ ಬಗ್ಗೆ ಹಾದಿ ಬೀದಿಯಲ್ಲಿ ವಿರೋಧ ವ್ಯಕ್ತಪಡಿಸದೆ ಅವರಿಗೆ ಕಾನೂನು ಬದ್ಧವಾಗಿ ದೊರಕಿರುವ ವೇದಿಕೆಯಲ್ಲಿ ಚರ್ಚಿಸಿ ತಮ್ಮ ಅಧಿಕಾರ ಚಲಾಯಿಸಲಿ ಕ್ಷುಲ್ಲಕ ಕಾರಣಗಳಿಗೆ ವಿರೋಧ ವ್ಯಕ್ತಪಡಿಸದೆ ಅಭಿವೃದ್ಧಿ ಕೆಲಸಗಳಿಗೆ ಕೈ ಜೋಡಿಸಲಿ ಎಂದರು.
ನಗರಸಭಾ ಮಾಜಿ ಅಧ್ಯಕ್ಷೆ ರೇಷ್ಮಾಭಾನು,  ಕೆ.ಎಲ್.ಕುಮಾರ್, ನಗರಸಭಾ ಸದಸ್ಯ ಮುದ್ದುಕೃಷ್ಣೇಗೌಡ, ಮುಖಂಡರಾದ ಮಲವೇಗೌಡ, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಚಿದಾನಂದ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement