ರಾಮನಗರಕ್ಕೆ 2ನೇ ಬಾರಿಗೆ ಪ್ರತಿಪಕ್ಷ ನಾಯಕ ಸ್ಥಾನ
ಕ.ಪ್ರ.ವಾರ್ತೆ ರಾಮನಗರ ಮೇ 31
ಮುಖ್ಯಮಂತ್ರಿಗಳ ಉತ್ಪಾದನಾ ಕೇಂದ್ರವೆಂದೇ ಹೆಸರಾಗಿರುವ ರಾಮನಗರ ಜಿಲ್ಲೆಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನ 2ನೇ ಬಾರಿಗೆ ಒಲಿದು ಬಂದಿದೆ. ರಾಮನಗರ ಕ್ಷೇತ್ರ ಪ್ರತಿನಿಧಿಸುತ್ತಿರುವ ಎಚ್.ಡಿ.ಕುಮಾರಸ್ವಾಮಿ ಈ ಜಿಲ್ಲೆಯ 2ನೇ ಪ್ರತಿಪಕ್ಷ ನಾಯಕರಾಗಿದ್ದಾರೆ. ಈ ಹುದ್ದೆ 1957ರಲ್ಲಿ ಚನ್ನಪಟ್ಟಣದಿಂದ ಆಯ್ಕೆಯಾಗಿದ್ದ ಪಿಎಸ್ಪಿ (ಪ್ರಜಾ ಸೋಷಿಲಿಸ್ಟ್ ಪಾರ್ಟಿ) ನಾಯಕ ಬಿ.ಕೆ.ಪುಟ್ಟರಾಮಯ್ಯ ಅಲಂಕರಿಸಿದ್ದರು.
2004ರಲ್ಲಿ ರಾಮನಗರದಿಂದ ಚೊಚ್ಚಲ ಬಾರಿ ಆಯ್ಕೆಯಾಗಿದ್ದ ಕುಮಾರಸ್ವಾಮಿ ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು. ಈಗ ಪ್ರತಿಪಕ್ಷ ನಾಯಕ. ಒಟ್ಟಾರೆ ರಾಮನಗರ ಅಧಿಕಾರದ ಶಕ್ತಿ ಕೇಂದ್ರವೆನಿಸಿದೆ. ಕೆಂಗಲ್ ಹನುಮಂತಯ್ಯ, ಎಚ್.ಡಿ.ದೇವೇಗೌಡ ಕೂಡ ರಾಮನಗರದಿಂದಲೇ ಗೆದ್ದು ಮುಖ್ಯಮಂತ್ರಿ ಹುದ್ದೆಗೇರಿದ್ದರು. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿ ವಿಧಾನಸಭೆ ಸದಸ್ಯರಾಗಲು ಇದೇ ಜಿಲ್ಲೆಯ ಕನಕಪುರದಿಂದ ಮರು ಚುನಾವಣೆಯಲ್ಲಿ ಆಯ್ಕೆಯಾಗಿದ್ದರು.