ವಿವಾದ ನಡುವೆ ಗುದ್ದಲಿಪೂಜೆ
ಚನ್ನಪಟ್ಟಣ: ಸಾಕಷ್ಟು ವಿವಾದಗಳ ನಡುವೆ ಪಟ್ಟಣದ ಖಾಸಗಿ ಬಸ್ ಟರ್ಮಿನಲ್ ನಿರ್ಮಾಣ ಕಾಮಗಾರಿಗೆ ಶಾಸಕ ಯೋಗೇಶ್ವರ್ ನಿರ್ವಿಘ್ನವಾಗಿ ಗುದ್ದಲಿಪೂಜೆ ನೆರವೇರಿಸಿದರು.
ಗುರುವಾರ ಸಂಜೆಯಷ್ಟೇ ನಿಗದಿಯಾಗಿದ್ದ ಕಾರ್ಯಕ್ರಮ ಶುಕ್ರವಾರ ಮುಂಜಾನೆ ವೇಳೆಗೆ ರದ್ಧಾಗಿರುವುದಾಗಿ ಸುದ್ದಿ ಹರಿದಾಡಿತ್ತಾದರೂ, ಸಂಜೆ 5ರ ಸುಮಾರಿಗೆ ಯೋಗೇಶ್ವರ್ ಬೆಂಬಲಿಗರೊಂದಿಗೆ ಉದ್ಘಾಟನೆ ನೆರವೇರಿಸಿದರು.
ವಿಫಲವಾದ ಕಾಂಗ್ರೆಸ್ ಯತ್ನ: ಯೋಗೇಶ್ವರ್ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ರದ್ದು ಪಡಿಸುವಂತೆ
ತಾಲೂಕು ಕಾಂಗ್ರೆಸ್‌ನ ಕೆಲ ಮುಖಂಡರು ಪಕ್ಷದ ಹಿರಿಯ ಮುಖಂಡರ ಮೇಲೆ ಒತ್ತಡ ತರುವ ಪ್ರಯತ್ನ ನಡೆಸಿದರಾದರೂ ಕೊನೆಕ್ಷಣದಲ್ಲಿ ಅದು ಕೈಗೂಡಲಿಲ್ಲ.
ತಾಲೂಕು ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿ ಜತೆ ಮಾತಾಡಿದ್ದಾರೆ ಅವರೇ ಕಾರ್ಯಕ್ರಮ ಮುಂದೂಡುವಂತೆ ಸೂಚಿಸಿದ್ದಾರೆ ಎಂದವರು ಹೇಳಿದರಾದರೂ, ಸಂಜೆ ಶಂಕುಸ್ಥಾಪನೆ ನೆರವೇರಿಸಿ ಯೋಗೇಶ್ವರ್ ಸಿಎಂ ಸೂಚನೆ ಮೇರೆಗೆ ಕಾರ್ಯಕ್ರಮ ನಡೆಸುತ್ತಿದ್ದೇನೆ ಎಂದೇಳುವ ಮೂಲಕ ಅಚ್ಚರಿಗೆ ಕಾರಣವಾದರು.
ಮೊದಲ ಪ್ರಯತ್ನಕ್ಕೆ ಹಿನ್ನಡೆ: ಕಾರ್ಯಕ್ರಮ ರದ್ದುಪಡಿಸಲು ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಪ್ರಯತ್ನಗಳೆಲ್ಲವೂ ವಿಫಲಗೊಂಡು ಯೋಗೇಶ್ವರ್ ಓಟಕ್ಕೆ ಬ್ರೇಕ್ ಹಾಕಲು ಹೊರಟ ಕಾಂಗ್ರೆಸ್ ಮುಖಂಡರ ಮೊದಲ ಪ್ರಯತ್ನಕ್ಕೆ ಹಿನ್ನಡೆಯಾದಂತಾಗಿದೆ.
ಮೌನವಾದ ಜೆಡಿಎಸ್: ಕಾರ್ಯಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್ ನಗರಸಭಾ ಸದಸ್ಯರು ಉದ್ಘಾಟನೆ ನೆರವೇರಿಸಿದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರಾದರೂ ಯೋಗೇಶ್ವರ್ ಹಮ್ಮಿಕೊಂಡಿದ್ದ ಗುದ್ದಲಿ ಪೂಜೆ ನಿರ್ವಿಘ್ನವಾಗೇ ನಡೆಯಿತು.
ಬಿಗಿ ಬಂದೋಬಸ್ತ್: ಜೆಡಿಎಸ್ ನಗರಸಭಾ ಸದಸ್ಯರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಮುಂಜಾಗಣತಾ ಕ್ರಮವಾಗಿ ಬಿಗಿ ಪೊಲೀಸ್‌ಬಂದೋಬಸ್ತ್ ಒದಗಿಸಲಾಗಿತ್ತು.
ಡಿವೈಎಸ್‌ಪಿ ಧರಣೇಂದ್ರ ನೇತೃತ್ವದಲ್ಲಿ ಎಲ್ಲಾ ಠಾಣೆಯ ಪೊಲೀಸ್ ಅಧಿಕಾರಿಗಳು, ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಹಾಜರಿದ್ದು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.
ಎರಡನೇ ಬಾರಿಗೆ ಶಂಕುಸ್ಥಾಪನೆ: ಹಿಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಂದ ನೆರವೇರಿಸಿದ್ದ ಶಂಕುಸ್ಥಾಪನೆಯನ್ನು ಮತ್ತೆ ಯೋಗೇಶ್ವರ್ ನೆರವೇರಿಸುತ್ತಿದ್ದಾರೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿತ್ತಾದರೂ, ಇದನ್ನು ನಿರಾಕರಿಸಿ ಯೋಗೇಶ್ವರ್ ಹಿಂದೆ ಉದ್ಘಾಟನೆ ನಡೆದೇ ಇಲ್ಲ ಎಂದು ಸ್ಪಷ್ಟೀಕರಣ ನೀಡಿದರು.