ಗ್ರಾಹಕರ ಶೋಷಣೆ ನಿಲ್ಲಲಿ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ನ. 9
ಕಂಪ್ಯೂಟರೀಕರಣದ ಹೆಸರಿನಲ್ಲಿ ವಿದ್ಯುತ್ ಗ್ರಾಹಕರ ಶೋಷಣೆ ನಿಲ್ಲಲಿ. ಕೂಡಲೇ ಹೆಚ್ಚುವರಿ ನಗದು ಕೌಂಟರ್ಗಳನ್ನು ಆರಂಭಿಸಿ ಎಂದು ಆಗ್ರಹಿಸಿ ದೊಡ್ಡಬಳ್ಳಾಪುರ ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ ಇಲ್ಲಿನ ಪ್ರವಾಸಿ ಮಂದಿರ ವೃತ್ತದಲ್ಲಿರುವ ಬೆಸ್ಕಾಂ ಕಚೇರಿಗೆ ಶುಕ್ರವಾರ ಮಧ್ಯಾಹ್ನ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಮುಖಂಡರು, ಬೆಸ್ಕಾಂನಲ್ಲಿ ನಗದು ಪಾವತಿ ಕಂಪ್ಯೂಟರೀಕೃತ ವ್ಯವಸ್ಥೆ ಜಾರಿಗೆ ಬಂದಿದೆ. ಇನ್ಫೋಸಿಸ್ ನಿರ್ದೇಶನದಲ್ಲಿ ಕೈಗೊಂಡಿರುವ ಈ ಮಹತ್ವದ ಯೋಜನೆ ದೂರಗಾಮಿ ಆಲೋಚನೆಗೆ ಪೂರಕವಾಗಿದ್ದರೂ ಗ್ರಾಹಕರು ಮತ್ತು ಗುತ್ತಿಗೆದಾರರಿಗೆ ಸಮಸ್ಯೆ ತಂದೊಡ್ಡಿದೆ. ಹಣ ಕಟ್ಟಲು ಬರುವ ವಿದ್ಯುತ್ ಗ್ರಾಹಕರು ಮತ್ತು ಗುತ್ತಿಗೆದಾರರು ಕನಿಷ್ಠ 2ರಿಂದ 3 ಗಂಟೆಗಳ ಕಾಲಾವಧಿ ಕಾಯಲೇ ಬೇಕಾದ ಪರಿಸ್ಥಿತಿ ಉಂಟಾಗಿದೆ. ಇದರಿಂದ ಸಮಯ ಪ್ರಯೋಜನವಿಲ್ಲದೆ ವ್ಯಯವಾಗುವುದರ ಜೊತೆಗೆ ಅನೇಕ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿದೆ. ಹಲವು ಬಾರಿ ಈ ಸಮಸ್ಯೆಯ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಭರವಸೆಗಳು ಸಿಕ್ಕವೇ ವಿನಃ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಒಂದು ಬಿಲ್ ಕಟ್ಟಲು ಒಂದು ದಿನ ಪೂರ್ತಿ ಕೆಲವೊಮ್ಮೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ಸಂಪರ್ಕಗಳು ಪಡೆದು 6 ತಿಂಗಳೇ ಕಳೆದರೂ ಗ್ರಾಹಕರಿಗೆ ಬಿಲ್ ತಲುಪುವ ವ್ಯವಸ್ಥೆಯಾಗಿಲ್ಲ. ಈ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕು. ಪ್ರತಿಭಟನಾ ಸ್ಥಳಕ್ಕೆ ಉನ್ನತ ಅಧಿಕಾರಿಗಳು ಬಂದು ಸ್ಪಷ್ಟನೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಬೆಸ್ಕಾಂ ಅಧಿಕಾರಿಗಳು, ಸಮಸ್ಯೆಯ ಕುರಿತು ಶೀಘ್ರವೇ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಭರವಸೆ ನೀಡಿದರು. ಮನವಿ ಪತ್ರವನ್ನು ಉನ್ನತಾಧಿಕಾರಿಗಳಿಗೆ ತಲುಪಿಸಿ ಅವರ ಮಾರ್ಗದರ್ಶನದಲ್ಲಿ ಗ್ರಾಹಕಸ್ನೇಹಿ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ತ.ನ.ಪ್ರಭುದೇವ್, ಗೌ.ಅಧ್ಯಕ್ಷ ಎನ್.ವೆಂಕಟೇಶ್, ಉಪಾಧ್ಯಕ್ಷ ಫಾಲನೇತ್ರಯ್ಯ, ಕಾರ್ಯದರ್ಶಿ ಶಿವಕುಮಾರಯ್ಯ, ಮುಖಂಡರಾದ ರಾಮಸ್ವಾಮಿ, ಆನಂದ್, ರಂಗಸ್ವಾಮಿ, ಭಾಸ್ಕರ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಸಲಹೆಗಾರರು ಭಾಗವಹಿಸಿದ್ದರು.