ಜ್ಞಾನದೀಪ ಶಾಲೆಯಲ್ಲಿ ಕಾನೂನು ಸೇವೆಗಳ ದಿನಾಚರಣೆ
ದೇವನಹಳ್ಳಿ: ದೇವನಹಳ್ಳಿ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ತಾಲೂಕು ವಕೀಲರ ಸಂಘ ಸಂಯುಕ್ತ ಆಶ್ರಯದಲ್ಲಿ ನಂದಿಗಿರಿಧಾಮ ರಸ್ತೆಯಲ್ಲಿರುವ ಮಾಳಿಗೇನಹಳ್ಳಿ ಜ್ಞಾನದೀಪ ಅಕಾಡಮಿ ಶಾಲೆಯಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಕಾನೂನು ಅರಿವು ಸಮಾರಂಭ ಶನಿವಾರ ಆಯೋಜಿಸಲಾಗಿತ್ತು.
ಉದ್ಘಾಟನೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಎಸ್.ನಟರಾಜ್ ನೆರವೇರಿಸಿ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ 1987ರಲ್ಲಿ ಸಂಸತ್ತಿನಲ್ಲಿ ಅನುಮೋದನೆಗೊಂಡು 1995ರಲ್ಲಿ ಜಾರಿಗೆ ಬಂತು ಎಂದರು. ಈ ಕಾನೂನು ಸೇವೆ ಬಡವರಿಗೆ ಮತ್ತು ಕಾನೂನಿನಿಂದ ವಂಚಿತರಾದವರಿಗೆ ಉಚಿತವಾಗಿ ಸೇವೆ ನೀಡಲಾಗುತ್ತಿದೆ ಎಂದರು.
ಇದೇ ಸಂಧರ್ಭದಲ್ಲಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಯು.ಎಮ್.ಅಡಿಗ ಮಾತನಾಡಿ ಸ್ವಾಸ್ಥ್ಯ ಸಮಾಜಕ್ಕೆ ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಬೇಕಾಗುತ್ತದೆ ಎಂದರು. ಕಾನೂನಿನ ಅರಿವು ಇದ್ದಾಗ
ಮಾತ್ರ ಸಾಕಷ್ಟು ಅಪರಾಧಗಳನ್ನು ತಡೆಯಬಹುದು. ಅಲ್ಲದೆ ಇತರರಿಗೂ ಕಾನೂನಿನ ಅರಿವು ಮೂಡಿಸಬೇಕು ಎಂದರು.
ತಾಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶ ಜೈಬುನ್ನಿಸ, ಎಪಿಪಿ ಗಣಪತಿ ಹಾಗೂ ತಾಲೂಕು ವಕೀಲರ ಸಂಘದ ಅಧ್ಯಕ್ಷ ಆರ್. ಮಾರೇಗೌಡ ಮಾತನಾಡಿದರು. ಅಧ್ಯಕ್ಷತೆಯನ್ನು ಜ್ಞಾನದೀಪ ಅಕಾಡೆಮಿ ಅಧ್ಯಕ್ಷೆ ದೀನಾ ನಾಗರಾಜ್ ವಹಿಸಿದ್ದರು. ಶಿಕ್ಷಕರಾದ ನವೀನ್ ಸ್ವಾಗತ ಕೋರಿದರು. ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಮುನಿರಾಜು, ಖಜಾಂಚಿ ಸಿ.ವೆಂಕಟೇಶ್ ಉಪಸ್ಥಿತರಿದ್ದರು.