ಪಿಂಚಣಿ ಗೊಂದಲಕ್ಕೆ ಹಿಂದಿನ ಸರ್ಕಾರ ಹೊಣೆ
ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ವೈಫಲ್ಯಕ್ಕೆ ಹಿಂದಿನ ಸರ್ಕಾರ ಮತ್ತು ಹಿಂದಿನ ಜನಪ್ರತಿನಿಧಿಗಳು ಹೊಣೆ. ಹೊಸ ಸರ್ಕಾರ ಬಂದ ಮೇಲೆ ಯಾವ ಪಿಂಚಣಿದಾರರ ಅರ್ಜಿಗಳನ್ನೂ ತಿರಸ್ಕರಿಸಿಲ್ಲ. ಯಾವ ಫಲಾನುಭವಿಗಳನ್ನೂ ಪಟ್ಟಿಯಿಂದ ಕೈಬಿಟ್ಟಿಲ್ಲ ಎಂದು ಶಾಸಕ ಟಿ. ವೆಂಕಟರಮಣಯ್ಯ ತಿಳಿಸಿದ್ದಾರೆ.
ಈ ಕುರಿತು ವಿವರಣೆ ನೀಡಿರುವ ಅವರು, ತಾಲೂಕಿನಲ್ಲಿ ಕೂಡಲೇ ಸಮಸ್ಯೆಯನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇನ್ನು ಮುಂದೆ ಅಧಿಕಾರಿಗಳು ಫಲಾನುಭವಿಗಳ ಮನೆಗೆ ಪರಿಶೀಲನೆಗೆ ತೆರಳಿದಾಗ ಅಲ್ಲಿ ಫಲಾನುಭವಿಗಳಿಲ್ಲದಿದ್ದರೆ, ಮನೆಯಲ್ಲಿ ಯಾರೂ ಇರದಿದ್ದರೆ ಸುತ್ತಲ ಮನೆಯ ಕೆಲವರಿಂದ ದೃಢೀಕರಣ ಮಾಹಿತಿ ಪಡೆದು ತರುವಂತೆ ತಿಳಿಸಿದ್ದೇನೆ. ಅರ್ಹರಿಗೆ ಸವಲತ್ತು ನೀಡಲು ಯಾವುದೇ ಸಮಸ್ಯೆಗಳೂ ಇಲ್ಲ. ಹೊಸದಾಗಿ ಅರ್ಜಿ ಸಲ್ಲಿಸಿ ಸವಲತ್ತು ಪಡೆಯಿರಿ. ಸಂಘಟನೆಗಳು ಜನರಲ್ಲಿ ಜಾಗೃತಿ ಮೂಡಿಸಿ ವ್ಯವಸ್ಥೆಯ ಲೋಪಗಳನ್ನು ಸರಿಪಡಿಸಬೇಕು. ಅಭಿವೃದ್ಧಿಪರ ಯೋಜನೆಗಳಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.