ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆಲೂ ಬೆಳೆಗೆ ವ್ಯಾಪಕ ಅಂಗಮಾರಿ ರೋಗ, ಸಂಕಷ್ಟದಲ್ಲಿ ರೈತ

Rashmi Kasaragodu
Updated On : 11 Nov 2013, 1:03 am

ಸೂಲಿಬೆಲೆ: ಹೊಸಕೋಟೆ ತಾಲೂಕಿನಲ್ಲಿಯೇ ಅತಿ ಹೆಚ್ಚು ಆಲೂಗಡ್ಡೆ ಬೆಳೆ ವ್ಯವಸಾಯಗಾರರನ್ನು ಹೊಂದಿರುವ ಸೂಲಿಬೆಲೆ ಹೋಬಳಿಯಲ್ಲಿ ಪ್ರಸಕ್ತ ದಿನಗಳಲ್ಲಿ ಆಲೂಗಡ್ಡೆ ಬೆಳೆಗೆ ಅಂಗಮಾರಿ ಆವರಿಸಿಕೊಂಡಿದ್ದು, ಬೆಳೆಯಿಂದ ಲಕ್ಷಾಂತರ ರು.ನಷ್ಟ ಹೊಂದಿ ರೈತರು ಕೈ ಸುಟ್ಟುಕೊಳ್ಳುವಂತಾಗಿದೆ.
ಎಲ್ಲಿ ಎಷ್ಟು : ಹೊಸಕೋಟೆ ತಾಲೂಕಿನ ಐದು ಹೋಬಳಿ ಕೇಂದ್ರಗಳ ಪೈಕಿ ಸೂಲಿಬೆಲೆ ಮತ್ತು ಕಸಬಾ ವ್ಯಾಪ್ತಿಯಲ್ಲಿ ಸುಮಾರು 50ರಿಂದ 60ಹೆಕ್ಟರ್, ಜಡಿಗೇನಹಳ್ಳಿ, ನಂದಗುಡಿ ಹೋಬಳಿಯಲ್ಲಿ 20ರಿಂದ 30 ಹೆಕ್ಟರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯನ್ನು ಬೆಳೆಯುತ್ತಾರೆ. ಒಟ್ಟಾರೆ 180 ರಿಂದ 200 ಎಕರೆ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗುತ್ತಿದೆ.
ಒಕ್ಕರಿಸಿಕೊಂಡ ಅಂಗಮಾರಿ: ಸೂಲಿಬೆಲೆ, ಗಿಡ್ಡಪ್ಪನಹಳ್ಳಿ, ನಗರೇನಹಳ್ಳಿ, ಒಳಗೆರಪುರ, ಅತ್ತಿಬೆಲೆ, ಸಾದಪ್ಪನಹಳ್ಳಿ ವ್ಯಾಪ್ತಿ ಪ್ರದೇಶದಲ್ಲಿ ಎಕರೆಗಟ್ಟಲೇ ರೈತರು ಆಲೂಗಡ್ಡೆ ಬೆಳೆಯ ಬಿತ್ತನೆಯನ್ನು ಮಾಡಿದ್ದಾರೆ. ಬೆಳೆ ಹಾಕಿದ ಎರಡು ತಿಂಗಳಲ್ಲಿ ಅಂಗಮಾರಿ  ವ್ಯಾಪಿಸಿಕೊಂಡಿದ್ದು ದುಬಾರಿ ಔಷಧಗಳನ್ನು ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ
ಬಾರದೆ ಬೆಳೆ ಕೈಗೆ ಸಿಗದಂತಾಗಿದೆ. ರೋಗ ತಗುಲಿದ ಗಿಡ ಹೂ ಬಿಟ್ಟ ನಂತರ ಹೂ ಉದುರಿ ಹೋಗುತ್ತಿದ್ದಂತೆ ಗಿಡದ ಸುಳಿ ಸುಟ್ಟಂತಾಗಿ ಕರಕಲಾಗುತ್ತಿದೆ. ಅಲ್ಲಿಂದ ಇಡೀ ಗಿಡಕ್ಕೆ ವ್ಯಾಪಿಸಿ ಆಲೂಗಡ್ಡೆ ಗಾತ್ರದಲ್ಲಿ ಕಿರಿದಾಗುತ್ತಾ ಹೋಗುತ್ತದೆ.ಇದರಿಂದ ರೈತನಿಗೆ ನಿರೀಕ್ಷಿತ ಇಳುವರಿ ಸಿಗದೇ ನಷ್ಟ ಹೊಂದುವಂತಾಗಿದೆ. ಕಪ್ಪು ಮಿಶ್ರಿತ ಪ್ರದೇಶದಲ್ಲಿ ಹೆಚ್ಚು-ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ ಈ ರೋಗ ಬೇಗ ಹರಡುತ್ತದೆ. ಸೂಲಿಬೆಲೆ, ಕಸಬಾ ವ್ಯಾಪ್ತಿಯಲ್ಲಿ ಕಪ್ಪು ಮಿಶ್ರಿತವಾಗಿದ್ದು, ತೇವಾಂಶ ಬೇಗ ಹೀರಿಕೊಳ್ಳುತ್ತದೆ. ಮರಳು ಮಿಶ್ರಿತ ಭೂಮಿಯಲ್ಲಿ ತೇವಾಂಶ ದೀರ್ಘಾವದಿ ತೇವಾಂಶವಿರುವುದಿಲ್ಲ. ಬಿತ್ತನೆಯ ವಾತಾವರಣಕ್ಕೂ ಮುನ್ನ ರೈತರು ಹೆಚ್ಚಿನ ಲಾಭಹೊಂದಬೇಕು ಎನ್ನುವ ಉದ್ದೇಶದಿಂದ ಆಲೂ ಬಿತ್ತಿ ನಷ್ಟಕ್ಕೆ ಸಿಲುಕುತ್ತಿದ್ದಾರೆ.



ನೋಂದಾಯಿತ ಎಪಿಎಂಸಿಗಳಲ್ಲಿ ಬಿತ್ತನೆ ಆಲೂಗಡ್ಡೆಯನ್ನು ಖರೀದಿಸಿ ಬೆಳೆ ನಷ್ಟವಾದರೆ ಬೆಳೆ ನಷ್ಟ ಪರಿಹಾರ ನೀಡಲಾಗುತ್ತದೆ. ಆದರೇ ಮಧ್ಯವರ್ತಿಗಳ ಕೈಗೆ ಸಿಕ್ಕಿ  ಖಾಸಗಿ ವ್ಯಕ್ತಿಗಳಿಂದ  ಬಿತ್ತನೆ ಆಲೂ ಬೆಳೆ ವಿಫಲವಾದರೆ ನಷ್ಟ ಪರಿಹಾರ ಸಿಗುವುದಿಲ್ಲ. ಅವಧಿಗೆ ಮುನ್ನ ಆಲೂ ಬಿತ್ತನೆ ಹಾಗೂ ಹವಾಗುಣದ ಪ್ರಭಾವದಿಂದ ರೋಗ ಬರುತ್ತದೆ. ರೋಗ ತಗುಲಿದ ಬೆಳೆಯಲ್ಲಿ ಶೇ.60 ರಷ್ಟು ಬೆಳೆ ಕುಂಠಿತವಾಗುತ್ತದೆ.
ಟಿ ಪರಮೇಶ್, ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ, ಹೊಸಕೋಟೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement