ನಶಿಸುತ್ತಿರುವ ದೇಸೀ ತಳಿ ಉಳಿಸುವ ಕೆಲಸ ಆಗಲಿ
ರಾಮನಗರ: ಹಸಿರು ಕ್ರಾಂತಿಗೂ ಮೊದಲು ದೇಶದಲ್ಲಿ ಸುಮಾರು ಐದು ಲಕ್ಷಕ್ಕೂ ಹೆಚ್ಚು ಬತ್ತದ ತಳಿಗಳಿದ್ದವು. ಆದರೆ, ಇಂದು ಬೆರಳೆಣಿಕೆಯಷ್ಟು ತಳಿಗಳು ಮಾತ್ರ ಉಳಿದಿವೆ. ನಶಿಸುತ್ತಿರುವ ದೇಸೀ ತಳಿಗಳನ್ನು ಉಳಿಸುವ ಕೆಲಸ ಮೊದಲು ಆಗಬೇಕಿದೆ ಎಂದು ಸಾವಯವ ಕೃಷಿಕ ಎಸ್. ಬೋರೇಗೌಡ ತಿಳಿಸಿದರು.
ತಾಲೂಕಿನ ಕೂಟಗಲ್ ಗ್ರಾಮದಲ್ಲಿ ಪ್ರೊ.ಎಂ.ಶಿವನಂಜಯ್ಯ ಅವರ ಹೊಂಗನಸು ಮನೆ ಪ್ರವೇಶದ ಅಂಗವಾಗಿ ನಡೆದ ಹಸಿರು ಚಿಂತನೆ ಮತ್ತು ಗೀತಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಯಾ ಪ್ರದೇಶಗಳ ಭೌಗೋಳಿಕ ಲಕ್ಷಣಗಳಿಗೆ ಅನುಗುಣವಾಗಿ ದೇಸೀ ತಳಿಗಳನ್ನೇ ಬೆಳೆಯಬೇಕು ಎಂದರು.
ನಾಟಿ ತಳಿಗಳಲ್ಲಿ ಪೌಷ್ಟಿಕಾಂಶಗಳು ಅತ್ಯಧಿಕವಾಗಿರುತ್ತವೆ. ಈ ಆಹಾರ ಪದಾರ್ಥಗಳನ್ನು ಸೇವಿಸದರೆ ಮನುಷ್ಯ ಆರೋಗ್ಯವಂತರಾಗಿ ಜೀವನ ನಡೆಸಬಹುದು. ಹೆಚ್ಚು ಉತ್ಪಾದನೆ ಮಾಡಬೇಕೆನ್ನುವ ಉದ್ದೇಶದಿಂದ ಹೈಬ್ರಿಡ್ ತಳಿಗಳನ್ನೇ ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಇಂತಹ ಧಾನ್ಯಗಳಲ್ಲಿ ಪೌಷ್ಟಿಕಾಂಶಗಳು ಹೆಚ್ಚಾಗಿ ಇರುವುದಿಲ್ಲ ಎಂದರು.
ರೋಗ ರುಜಿನು ಬರುವುದಿಲ್ಲ: ನಾಟಿ ತಳಿಗಳಿಗೆ ಯಾವುದೇ ತರಹದ ರೋಗ ರುಜಿನಗಳು ಬರುವುದಿಲ್ಲ. ಹೈಬ್ರಿಡ್ ತಳಿಗಳಿಗೆ ನಾನಾ ತರವಾದ ರೋಗಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ವೈರಸ್ ಹರಡಿದರೆ ಸುತ್ತಮುತ್ತಲಿನ ಐದಾರು ಕಿ.ಮೀ. ಪ್ರದೇಶದಲ್ಲಿ ಬೆಳೆದಿರುವ ಬೆಳೆ ಸಂಪೂರ್ಣವಾಗಿ ನಾಶವಾಗುತ್ತದೆ. ಇದರಿಂದ ರೈತರು ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು.
ಬೆಳೆಗಳಿಗೆ ಅತಿಯಾಗಿ ರಾಸಾಯನಿಕ ಗೊಬ್ಬರಗಳನ್ನು ಬಳಸುವುದರಿಂದ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತವೆ. ಪರಿಸರ ಸಮತೋಲನ ಕಳೆದುಕೊಂಡು ಫಲವತ್ತಾದ ಭೂಮಿ ಮುಂದೊಂದು ದಿನ ಬರಡಾಗಲಿದೆ. ತಿನ್ನುವ ಅನ್ನಕ್ಕೆ ವಿಷ ಬೆರೆಸುವುದನ್ನು ಇನ್ನಾದರೂ ನಿಲ್ಲಿಸಬೇಕು ಎಂದು ಹೇಳಿದರು.
ಅಪಾಯ ಕಟ್ಟಿಟ್ಟ ಬುತ್ತಿ: 1 ಕೆ.ಜಿ. ನಾಟಿ ಹಸುವಿನ ಸೆಗಣಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಸೂಕ್ಷ್ಮಾಣು ಜೀವಿಗಳಿರುತ್ತವೆ. ಇವು ಭೂಮಿಯಲ್ಲಿರುವ ಪೋಷಕಾಂಶಗಳನ್ನು ಸಸ್ಯಗಳು ಹೀರಿಕೊಂಡು ಹುಲುಸಾಗಿ ಬೆಳೆಯಲು ಸಹಾಯ ಮಾಡುತ್ತವೆ. ಆಧುನಿಕ ಕೃಷಿ ಹೆಸರಿನಲ್ಲಿ ರೈತರು ರಾಸುಗಳನ್ನು ಸಾಕುವುದನ್ನೇ ನಿಲ್ಲಿಸಿದ್ದಾರೆ. ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.
ಸದುಪಯೋಗ ಪಡಿಸಿಕೊಳ್ಳಿ: ತೋಟಗಾರಿಕೆಯು ಇಂದಿನ ದಿನಗಳಲ್ಲಿ ಉದ್ಯಮವಾಗಿ ಬೆಳೆಯುತ್ತಿದೆ. ರೈತರು ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಹೆಚ್ಚು ಉತ್ಪಾದನೆಗೆ ಮುಂದಾಗಬೇಕು. ತೋಟಗಾರಿಕೆ ಅಭಿವೃದ್ಧಿಗಾಗಿ ಇಲಾಖೆ ನೀಡುತ್ತಿರುವ ಸೌಲಭ್ಯಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಬೆಂಗಳೂರು
ವೈನ್ ಬೋರ್ಡ್ನ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಕೃಷ್ಣ ತಿಳಿಸಿದರು.
ಮನುಷ್ಯನ ದುರಾಸೆಯ ಪರಿಣಾಮವಾಗಿ ಅಪಾರ ಪ್ರಮಾಣದಲ್ಲಿ ಕಾಡು ನಾಶವಾಗುತ್ತಿದೆ. ಕಾಡು ಪ್ರಾಣಿಗಳಿಗೆ ಆಹಾರ ಸಿಗದೆ ನಾಡಿನತ್ತ ಮುಖ ಮಾಡಿವೆ. ನಾಡಿಗೆ ಬರುವ ಕಾಡು ಪ್ರಾಣಿಗಳನ್ನು ಮನುಷ್ಯ ಗುಂಡಿಕ್ಕಿ ಕೊಲ್ಲುವ ಮೂಲಕ ಪ್ರಕೃತಿಯ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾನೆ ಎಂದು ಪ್ರೊ.ಎಂ.ಶಿವನಂಜಯ್ಯ ತಿಳಿಸಿದರು.
ಹಿಂದೆ ಅಪಾರ ಅರಣ್ಯ ಇತ್ತು. ರೈತರು ತಮ್ಮ ಹೊಲಗಳಲ್ಲಿ ಬೆಳೆದ ಹಣ್ಣುಗಳ ಪೈಕಿ ತನಗೆ ಬೇಕಾದಷ್ಟು ತೆಗೆದುಕೊಳ್ಳುತ್ತಿದ್ದನು. ಹಣ ಸಂಪಾದಿಸುವ ದುರಾಸೆಯಿಂದ ಎಲ್ಲವನ್ನೂ ಮಾರಾಟ ಮಾಡುತ್ತಿದ್ದಾನೆ. ಇದರಿಂದ ಕಾಡು ಪ್ರಾಣಿಗಳಿಗೆ ಆಹಾರ ದೊರಕದೆ ನಾಡಿಗೆ ಲಗ್ಗೆ ಇಡುತ್ತಿವೆ ಎಂದು ವಿಷಾದಿಸಿದರು.
ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಕೂಟಗಲ್ ಗ್ರಾಪಂ ಅಧ್ಯಕ್ಷ ರಾಮಚಂದ್ರ, ಜೆಡಿಎಸ್ನ ತಾಲೂಕು ಘಟಕದ ಅಧ್ಯಕ್ಷ ಕೆ.ದೇವೇಗೌಡ, ಎ.ಟಿ.ದಾಸೇಗೌಡ, ವಸಂತ್ ಕುಮಾರ್, ಪ್ರೇಮ್ಕುಮಾರ್, ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.