ಪಶುಪಾಲನೆ ಉಳಿದರೆ ಮಾತ್ರ ಭರತ ಖಂಡ ಸಮೃದ್ಧಿ
ಮಾಗಡಿ: ಭಾರತೀಯ ಪರಂಪರೆಯಲ್ಲಿ ಪಶುಪಾಲನೆ ಪ್ರಾಚೀನ ವೃತ್ತಿಯಾಗಿದೆ. ಪಶುಪಾಲನೆ ಉಳಿದರೆ ಮಾತ್ರ ಭರತ ಖಂಡ ಸಮೃದ್ಧಿಯಾಗಿರುತ್ತದೆ ಎಂದು ಸಿದ್ದಗಂಗಾ ಮಠಾಧೀಶ ಕರ್ನಾಟಕ ರತ್ನ ಡಾ.ಶಿವಕುಮಾರಸ್ವಾಮಿಜೀ ನುಡಿದರು.
ಅವರು ತಾಲೂಕಿನ ವೀರೇಗೌಡನದೊಡ್ಡಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನುದಾನದೊಂದಿಗೆ ನೂತನವಾಗಿ ನಿರ್ಮಿಸಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಾ ರೈತರು ಸೋಮಾರಿತನ ಬಿಟ್ಟು ಬೆವರು ಸುರಿಸಿ ಭೂತಾಯಿ ಸೇವೆ ಮಾಡಬೇಕು. ಜೊತೆ ಜೊತೆಯಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಜೀವನ ಸಾರ್ಥಕಗೊಳಿಸಿಕೊಂಡು, ಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಆರ್ಥಿಕವಾಗಿ ಸ್ಥಿತಿವಂತರಾಗಿ: ಸಂಸದ ಡಿ.ಕೆ.ಸುರೇಶ್ ಮಾತನಾಡಿ ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸ್ಥಿತಿವಂತರಾಗಬೇಕು. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಈ ನಿಟ್ಟಿನಲ್ಲಿ ನಿಮ್ಮ ಸೇವಕನಾಗಿ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದರು.
ಶಾಸಕ ಎಚ್.ಸಿ. ಬಾಲಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಯುವಕರು ಉದ್ಯೋಗ ಅರಸಿ ನಗರಕ್ಕೆ ವಲಸೆ ಹೋಗುವುದನ್ನು ಬಿಟ್ಟು, ಗ್ರಾಮದಲ್ಲೇ ನೆಲೆಸಿ, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಉದ್ಯಮವನ್ನಾಗಿ ಸ್ಥಾಪಿಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಸ್ವಾವಲಂಬನೆಯತ್ತ ಬದುಕು ಸಾಗಿಸಬೇಕು ಎಂದು ಯುವಕರಿಗೆ ಕರೆ ನೀಡಿದರು.
ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ ಮಾತನಾಡಿ ತಾಲೂಕಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಬೆಳವಣಿಗೆ, ಕ್ಷೀರಕ್ರಾಂತಿ ಕುರಿತು ವಿವರಿಸಿದರು.
ಗುಮ್ಮಸಂದ್ರ ಮಠದ ಚಂದ್ರಶೇಖರಸ್ವಾಮೀಜಿ, ಬೆಂಗಳೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಟಿ.ಗುರುಲಿಂಗಯ್ಯ, ಪ್ರಧಾನ ವ್ಯವಸ್ಥಾಪಕ ಡಾ. ಕೃಷ್ಣಾರೆಡ್ಡಿ, ವ್ಯವಸ್ಥಾಪಕ ಡಾ. ಬಿ.ಎನ್. ನಾಗರಾಜು, ವೀರೇಗೌಡನದೊಡ್ಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿ.ಸಿ. ಬಸವರಾಜು, ಶೇಖರಯ್ಯ, ಆನಂದಕುಮಾರ್, ಶಿವಸ್ವಾಮಿ, ರುದ್ರೇಶ್, ವೇದಮೂರ್ತಿ, ಸಿದ್ದಯ್ಯ ಇತರರು ಇದ್ದರು.