ಬೀದಿ ನಾಯಿಗಳ ಹಾವಳಿ ತಪ್ಪಿಸಿ
ಬೊಂಬೆನಗರಿ ಚನ್ನಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದೆ. ಎಲ್ಲೆಂದರಲ್ಲಿ ಗುಂಪುಗೂಡಿ ಸಾರ್ವಜನಿಕರ ಮೇಲೆ ಎರಗುವ ಬೀಡಾಡಿ ನಾಯಿಗಳ ಕಾಟದಿಂದ ಜನರ ನೆಮ್ಮದಿಗೆ ಭಂಗ ಉಂಟಾಗಿದೆ. ದ್ವಿಚಕ್ರ ವಾಹನ, ಸೈಕಲ್ ಸವಾರರು, ಪಾದಚಾರಿಗಳು ಭಯದ ನೆರಳಿನಲ್ಲೇ ರಸ್ತೆಗಳಲ್ಲಿ ಸಾಗುವಂತಾಗಿದೆ.
ಪಟ್ಟಣದ ಚಾನ್ಲ್ ರಸ್ತೆ, ಕೋಟೆ, ಹೌಸಿಂಗ್ಬೋರ್ಡ್, ಅಪ್ಪಗೆರೆ ರಸ್ತೆ, ಮಹದೇಶ್ವರ ನಗರ ಸೇರಿದಂತೆ ಸಾಕಷ್ಟು ಕಡೆ ಬಿಡಾಡಿ ನಾಯಿಗಳದ್ದೇ ಹಾವಳಿಯಾಗಿದೆ. ಮಾಂಸದ ಅಂಗಡಿ, ಕೋಳಿ ಅಂಗಡಿಗಳ ಮುಂದೆ ಗುಂಪು ಗೂಡಿ ನಿಂತಿರುವ ನಾಯಿಗಳ ಹಿಂಡು ಈ ಮಾರ್ಗವಾಗಿ ತಿರುಗಾಡುವ ಸಾರ್ವಜನಿಕರಿಗೆ ಉಪದ್ರವ ನೀಡುತ್ತಿವೆ.
ಬೆಳಗಿನಜಾವ ವಾಯು ವಿಹಾರಕ್ಕೆ ತೆರಳುವ ಮಂದಿಗೆ ಈ ನಾಯಿಗಳು ಇನ್ನಿಲ್ಲದ ಕಿರಿಕಿರಿ ನೀಡುತ್ತಿವೆ. ರಾತ್ರಿ ವೇಳೆ ತಿರುಗಾಡುವ ದ್ವಿಚಕ್ರ ವಾಹನ ಸವಾರರಿಗೆ ಈ ನಾಯಿಗಳು ಅಡ್ಡ ಸಿಗುವುದರಿಂದ ವಾಹನ ಸವಾರರು ಆಯತಪ್ಪಿ ಜಾರಿ ಬೀದ್ದು ಕೈಕಾಲು ಮುರಿದು ಕೊಂಡಿರುವ ಪ್ರಸಂಗಗಳು ಸಾಕಷ್ಟಿವೆ.
ಬೊಂಬೆನಗರಿಯ ನಾಗರೀಕರು ಬಿಡಾಡಿ ನಾಯಿಗಳಿಂದ ಇನ್ನಿಲ್ಲದ ಸಮಸ್ಯೆ ಅನುಭವಿಸುತ್ತಿರುವ ಬಗ್ಗೆ ಪುರಪಿತೃಗಳು, ನಗರಸಭೆ ಅಧಿಕಾರಿಗಳಿಗೆ ಕಿಂಚಿತ್ ಕಾಳಜಿ ಇಲ್ಲ. ಜನರು ರೊಚ್ಚಿಗೇಳುವ ಮುನ್ನವೇ ಸಂಬಂಧಿಸಿದವರು ಎಚ್ಚೆತ್ತು, ನಾಯಿಗಳ ಹಾವಳಿ ತಡೆಗೆ ಮುಂದಾಗಬೇಕಿದೆ.
ಮಾರುಕಟ್ಟೆಗೆ ಕಾಯಕಲ್ಪ ಬೇಕಿದೆ
ಇತಿಹಾಸ ಮತ್ತು ಪುರಾಣ ಪ್ರಸಿದ್ಧ ಮಾಗಡಿ ಪಟ್ಟಣದಲ್ಲಿ ತರಕಾರಿ ಮಾರುಕಟ್ಟೆಯ ಅವಾಂತರ ಹೇಳ ತೀರದಾಗಿದೆ. ಕನಿಷ್ಠ ಮೂಲಭೂತ ಸೌಲಭ್ಯಗಳೂ ಇಲ್ಲದ ಕೊಚ್ಚೆ ಗುಂಡಿಯಂತಹ ಸ್ಥಳದಲ್ಲಿ ತರಕಾರಿ ಮಾರಾಟ ನಡೆಯುತ್ತಿದ್ದು, ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲು ಪುರಸಭೆ ಹಾಗೂ ತಾಲೂಕು ಆಡಳಿತವಿನ್ನೂ ಮುಂದಾಗಿಲ್ಲ.
ಸ್ಥಳೀಯ ಪುರಸಭೆಗೆ ಕೋಟಿಗಟ್ಟಲೆ ಅನುದಾನವೇನೋ ಹರಿದು ಬರುತ್ತಿದೆ. ಆದರೆ, ಪುರದ ನಾಗರಿಕರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಆಡಳಿತ ವರ್ಗ ಕಾಳಜಿ ತೋರುತ್ತಿಲ್ಲ. ಪುರ ಜನರೇ ಸ್ವಚ್ಛತೆ ಕಾಪಾಡಿ ಎನ್ನುವ ಘೋಷಣೆಯ ಫಲಕಗಳು ಎಲ್ಲೆಡೆ ರಾರಾಜಿಸುತ್ತಿವೆ. ಆದರೆ, ತರಕಾರಿ ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡಲು ಪುರಸಭೆ ಮನಸ್ಸು ಮಾಡಿಲ್ಲ. ತಾಲೂಕಿನ ವಿವಿಧ ಗ್ರಾಮಗಳ ರೈತರು ಕಷ್ಟಪಟ್ಟು ಬೆಳೆದ ತರಕಾರಿಯನ್ನು ಮಾರುಕಟ್ಟೆಗೆ ಮುಂಜಾನೆ 4 ಗಂಟೆಗೆ ತರುತ್ತಾರೆ. ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲದ ಕಾರಣ ರಸ್ತೆ ಬದಿಯನ್ನೇ ಮಾರುಕಟ್ಟೆಯನ್ನಾಗಿ ಮಾಡಿಕೊಂಡು ರೈತರ ತರಕಾರಿ ಮಾರಾಟ ಮಾಡಿಕೊಂಡು ಹಿಂತಿರುಗುತ್ತಾರೆ.
ಆರೋಗ್ಯದ ಹಿತದೃಷ್ಟಿಯಿಂದ ತಾಜಾ ತರಕಾರಿ ಖರೀದಿಗೆ ನಾಗರಿಕರು ಮುಂಜಾನೆಯೇ ಮುಗಿಬೀಳುತ್ತಾರೆ. ರಸ್ತೆಯೇ ಮಾರುಕಟ್ಟೆಯಾಗಿರುವುದರಿಂದ ತರಕಾರಿ ಖರೀದಿಸಲು ಹೋಗಿ ಮುಗ್ಗರಿಸಿ ಬಿದ್ದರುವ ಅನೇಕ ಉದಾಹರಣೆಗಳಿವೆ. ಮಹಿಳೆಯರು, ಮಕ್ಕಳಂತೂ ತರಕಾರಿ ಖರೀದಿಗೆ ಹೋಗಿ ಯಾತನೆ ಅನುಭವಿಸಿದ್ದಾರೆ.
ಗ್ರಾಹಕರು ರಸ್ತೆಯನ್ನೇ ಆಕ್ರಮಿಸುತ್ತಿರುವುದರಿಂದ ಸಂಚಾರಕ್ಕೂ ಸಂಚಕಾರ ಒದಗಿದೆ. ಮಳೆಗಾಲದಲ್ಲಂತೂ ಈ ತರಕಾರಿ ಮಾರುವ ತಾತ್ಕಾಲಿಕ ಮಾರುಕಟ್ಟೆ ಜಾಗ ಕೊಚ್ಚೆ ಗುಂಡಿಯಂತಾಗಿರುತ್ತದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಇದೆ. ಇನ್ನಾದರೂ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲು ಶಾಸಕರು, ಪುರಸಭೆ ಆಡಳಿತ ಮುಂದಾಗಲಿದೆ.
ರಾತ್ರಿ ವೇಳೆ ರೇಲ್ವೆ ಗೇಟ್ ತೆರೆಯಲಿ
ರಾಮನಗರ ನಗರಸಭೆ ವ್ಯಾಪ್ತಿಯ ಅಂಚಿನಲ್ಲಿರುವ ವಡೇರಹಳ್ಳಿ ಬಳಿ ಬೆಂಗಳೂರು-ಮೈಸೂರು ಚತುಷ್ಪಥ ಹೆದ್ದಾರಿ ಹಾಗೂ ಜೋಡಿ ರೈಲು ಮಾರ್ಗ ತೀರಾ ಸಮೀಪದಲ್ಲೇ ಹಾದು ಹೋಗಿದೆ. ಹೆದ್ದಾರಿಗೂ ರೇಲ್ವೆ ಹಳಿಗೂ ಇಲ್ಲಿರುವುದು ಆರೇಳು ಮೀಟರ್ ಮಾತ್ರವೇ ಅಂತರ.
ಹೆದ್ದಾರಿಯಿಂದ ವಡೇರಹಳ್ಳಿ ಗೇಟ್ ಮಾರ್ಗವಾಗಿ ಕೊತ್ತೀಪುರ, ಗಂಗರಾಜನಹಳ್ಳಿ, ರಾಂಪುರ, ಗೋಪಾಲಪುರ, ಸಾವಿರಾರು ಎಕರೆ ಜಮೀನು, ಫಾರಂ ಹೌಸ್, ಇಟ್ಟಿಗೆ ಗೂಡು, ರೇಷ್ಮೆ ಸಾಕಾಣಿಕೆ ಕೇಂದ್ರಗಳು, ಹೊಸ ಬಡಾವಣೆಗಳಿಗೆ ಸಂಪರ್ಕ ರಸ್ತೆಯಿದೆ.
ವಿಪರ್ಯಾಸದ ಸಂಗತಿಯೆಂದರೆ, ವಡೇರಹಳ್ಳಿ ಬಳಿಯ ಗೇಟಿನ ರಸ್ತೆ ಮೂಲಕ ಹಗಲು ವೇಳೆಯಲ್ಲಷ್ಟೇ ಸಂಚಾರ ಸಾಧ್ಯ. ಸಂಜೆ 6 ಗಂಟೆಯಾಗುತ್ತಲೇ ಗೇಟ್ ಬಂದ್ ಮಾಡಲಾಗುತ್ತದೆ. ಆ ಗೇಟ್ ತೆರೆಯುವುದು ಬೆಳಗ್ಗೆ 6ರ ನಂತರವೇ.
ಈ ಗೇಟ್ ಬಳಿ ಒಬ್ಬ ಕಾವಲುಗಾರನನ್ನು ನಿಯೋಜಿಸಲಾಗಿದೆ. ಇಷ್ಟಾಗಿಯೂ ರೈಲು ಸಂಚಾರವಿದ್ದಾಗಷ್ಟೇ ಗೇಟ್ ಹಾಕಿ, ರೈಲು ಸಂಚಾರವಿಲ್ಲದಿದ್ದಾಗ ತೆರೆಯಲು ಇರುವ ಸಮಸ್ಯೆಯಾದರೂ ಏನೆಂಬುದು ಅರ್ಥವಾಗುತ್ತಿಲ್ಲ. ವಡೇರಹಳ್ಳಿ ಗೇಟ್ ಪ್ರೀತಿಯಲ್ಲೇ ಜಿಲ್ಲೆಯ ವಿವಿಧ ಕಡೆ ರಾತ್ರಿ ವೇಳೆ ರೈಲ್ವೆ ಗೇಟ್ ಬಂದ್ ಮಾಡಲಾಗುತ್ತಿದೆ. ಇನ್ನಾದರೂ ಕಾವಲುಗಾರರಿಗೆ ಸ್ಪಷ್ಟ ಸೂಚನೆ ನೀಡಿ, ರೈಲು ಸಂಚಾರವಿದ್ದಾಗಷ್ಟೇ ಗೇಟ್ ಹಾಕಬೇಕು. ಉಳಿದ ಸಮಯ ಸಂಚಾರಕ್ಕೆ ಮುಕ್ತವಾಗಬೇಕಿದೆ.
ಶುಲ್ಕ ಪಾವತಿ ಸರಳೀಕರಿಸಿ
ಭೂ ಮಾಪನ ಇಲಾಖೆ ಕಚೇರಿಗಳಲ್ಲಿ ಭೂಮಿಯ ಅಳತೆ, ಹದ್ದುಬಸ್ತು, ಆಕಾರ್ ಬಂದ್, ಎಡ-ಬಲ ಕಾಪಿ ಸೇರಿದಂತೆ ವಿವಿಧ ದಾಖಲೆಗಳನ್ನು ಪಡೆಯಲು ನಿರ್ದಿಷ್ಟ ಶುಲ್ಕ ಪಾವತಿಸಬೇಕು. ಆದರೆ, ಹಣ ಪಾವತಿ ವಿಧಾನ ರೈತರ ಪಾಲಿಗೆ ತಾಪತ್ರಯದ ಕೆಲಸವಾಗಿದೆ.
ಕಚೇರಿಯಲ್ಲಿ ಪ್ರತಿ ದಾಖಲೆಗೂ ಸೆಬ್ಟ್ ಬ್ಯಾಂಕ್ ಆಫ್ ಮೈಸೂರಿನ ಶಾಖೆಗಳಲ್ಲಿ ಪ್ರತ್ಯೇಕ ಅಕೌಂಟಿಗೆ ಹಣ
ಸಂದಾಯ ಮಾಡಬೇಕಿದೆ. ಯಾವುದೋ ದಾಖಲೆ ಕೋರಿದ ಅರ್ಜಿಗೆ ಸಂಬಂಧಿಸಿದ ಶುಲ್ಕವನ್ನು ಇನ್ಯಾವುದೋ ಅಕೌಂಟಿಗೆ ಪಾವತಿಸಿದರೆ ಅದು ತಿರುಪತಿ ತಿಮ್ಮಪ್ಪನ ಹುಂಡಿಗೆ ಹೋದ ಹಣವಾಗಲಿದೆ.
ಹೀಗೆ ಪಾವತಿಸಿದ ಚಲನ್ ಲಗತ್ತಿಸಿ ಅರ್ಜಿ ಕೊಟ್ಟರೆ ಇಲಾಖೆಯಲ್ಲಿ ಪರಿಗಣಿಸುವುದಿಲ್ಲ. ಕಟ್ಟಿದ ಹಣ ವಾಪಸ್ ಪಡೆಯುವುದಕ್ಕೂ ಆಗುವುದಿಲ್ಲ. ಅಧಿಕಾರಿಗಳು ಈ ವಿಷಯದಲ್ಲಿ ರೈತರಿಗೆ ಸೂಕ್ತ ಮಾಹಿತಿ ನೀಡುವ ಗೋಜಿಗೂ ಹೋಗದೆ ತಮ್ಮಷ್ಟಕ್ಕೆ ತಾವಿರುತ್ತಾರೆ.
ಆಗಿರುವ ತಪ್ಪಿನ ವಿಷಯವನ್ನು ಸಿಬ್ಬಂದಿ ತಕ್ಷಣವೇ ಗಮನಕ್ಕೆ ತರುವುದಿಲ್ಲ. ದಾಖಲೆ ಕೇಳಿ ಹೋದಾಗ ತಪ್ಪನ್ನು ಎತ್ತಿ ಹಿಡಿದು, ದಾಖಲೆ ನೀಡಲು ನಿರಾಕರಿಸಲಾಗುತ್ತದೆ. ಆಗ ಮತ್ತೊಮ್ಮೆ ಹಣ ಸಂದಾಯ ಮಾಡಿ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ಇನ್ನು ಮುಂದಾದರೂ ಶುಲ್ಕ ಪಾವತಿಗೆ ಸಂಬಂಧಿಸಿದಂತೆ ರೈತರಿಗೆ ಮಾಹಿತಿ ನೀಡಲು ಹಾಗೂ ಚಲನ್ ಒದಗಿಸುವ ಕೆಲಸಕ್ಕೆ ಇಲಾಖೆ ಕ್ರಮ ಕೈಗೊಳ್ಳಬೇಕು. ಹಣವನ್ನು ಬ್ಯಾಂಕಿನ ಬದಲು ಕಚೇರಿಯಲ್ಲೇ ಸಂದಾಯ ಮಾಡಿ ರಶೀದಿ ಪಡೆಯುವ ವ್ಯವಸ್ಥೆ ತಂದರೆ ಇನ್ನೂ ಒಳಿತು.