ಸಂತ್ರಸ್ತ ರೈತರಿಗೆ ಎಕರೆಗೆ ರು. 10 ಲಕ್ಷ ಪ್ಯಾಕೇಜ್ ನೀಡಲು ಚಿಂತನೆ
ಕ.ಪ್ರ.ವಾರ್ತೆ ರಾಮನಗರ ನ.10
ರಾಮದೇವರಬೆಟ್ಟದ ರಣಹದ್ದು ಧಾಮದ ಸಂತ್ರಸ್ತ ರೈತರಿಗೆ ಎಕರೆಗೆ ರು.10 ಲಕ್ಷ ಪ್ಯಾಕೇಜ್ ನೀಡಲು ಇಲಾಖೆ ಚಿಂತನೆ ನಡೆಸಿದೆ ಎಂದು ಪರಿಸರ ಮತ್ತು ಅರಣ್ಯಲಾಖೆ ಪ್ರಧಾನ ಕಾರ್ಯದರ್ಶಿ ಶಿವಶೈಲಂ ತಿಳಿಸಿದರು.
ರಾಮದೇವರ ಬೆಟ್ಟಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡವು ರಣಹದ್ದು ಧಾಮದ ವ್ಯಾಪ್ತಿಗೆ ಒಳಪಟ್ಟಿರುವ ಅರಣ್ಯ ಒತ್ತುವರಿ ಪ್ರಕರಣದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ, ತೆರವುಗೊಳಿಸಬೇಕು. ಈ ರೈತರಿಗೆ ಪರ್ಯಾಯ ಭೂಮಿ ಒದಗಿಸುವ ಸಂಬಂಧ ಕಂದಾಯ ಇಲಾಖೆ ಉನ್ನತ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಲಾಗುತ್ತಿದೆ ಎಂದರು.
ಅಪರೂಪದ ಜೀವವೈವಿಧ್ಯವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ರಣಹದ್ದುಗಳ ಸಂತಾನ ಅಭಿವೃದ್ಧಿ ಪಡಿಸಲು
ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ವಲಯ ಅರಣ್ಯಾಧಿಕಾರಿ ಲಿಂಗರಾಜು ಅವರಿಗೆ ಸೂಚಿಸಿದ ಅವರು ಹಣ್ಣುಗಳ ಸಸಿಯನ್ನು ಬೆಳೆಸಬೇಕೆಂದು ಸಲಹೆ ನೀಡಿದರು.
ಟ್ರೀ ಪಾರ್ಕ್ ನಿರ್ಮಾಣ: ಜಿಲ್ಲೆಯ ಕುಂಬಳಗೂಡಿನ 1500 ಎಕರೆ ಕಾಯ್ದಿಟ್ಟ ಅರಣ್ಯದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಟ್ರೀ ಪಾರ್ಕ್ ನಿರ್ಮಾಣ ಮಾಡಲು ಸರಕಾರ ಮುಂದಾಗಿದೆ. ಕೆಂಗಲ್ ಬಳಿ ನಿರ್ಮಾಣ ಮಾಡಿರುವ ಟ್ರೀಪಾರ್ಕ್ನಿಂದ ಪ್ರೇರೇಪಿತಗೊಂಡಿರುವ ಸರ್ಕಾರ ಇದೀಗ ರಾಜಧಾನಿಗೆ ಹೊಂದಿಕೊಂಡಿರುವ ಕುಂಬಳಗೂಡು ಬಳಿ ಟ್ರೀ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿದೆ.
ತಂತಿಬೇಲಿ ನಿರ್ಮಿಸಿ: ಈ ಸಂಬಂಧ ಕ್ರಿಯಾ ಯೋಜನೆಯನ್ನು ತಯಾರಿಸುವಂತೆ ಸೂಚಿಸಿದ ಶಿವಶೈಲಂ ಅವರು ತಕ್ಷಣ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದರು. ನರೇಗಾ ಕಾಮಗಾರಿಗಳಿಗೆ ಗರಿಷ್ಠ ಮಿತಿ ಇಲ್ಲದ ಕಾರಣ ಇದನ್ನು ಸದುಪಯೋಗಪಡಿಸಿಕೊಂಡು ಪ್ರವಾಸಿಗರಿಗೆ ಅಗತ್ಯವಾದ ಎಲ್ಲ ಮೂಲಭೂತ ಸೌಲಭ್ಯಗಳನ್ನು
ಒದಗಿಸಬೇಕು. ಹಸಿರು ಸೃಷ್ಟಿಗೆ ಒತ್ತು ನೀಡುವ ಜತೆಗೆ ಉದ್ದೇಶಿತ ಅರಣ್ಯದ ಸುತ್ತ ತಂತಿ ಬೇಲಿ ನಿರ್ಮಿಸಬೇಕೆಂದರು.
ಶ್ರೀಗಂಧದ ಗಿಡಗಳನ್ನು ಎಲ್ಲ ಅರಣ್ಯ ಪ್ರದೇಶದಲ್ಲಿ ನೆಡಲು ಕ್ರಮ ಕೈಗೊಳ್ಳಬೇಕು. ಪದೇ ಪದೇ ಆನೆಗಳು ಕಾಡಿನಿಂದ ಆಹಾರ ಅರಸಿ ನಾಡಿಗೆ ಬಾರದಂತೆ ತಡೆಯಲು ಅರಣ್ಯದಲ್ಲಿ ಯಥೇಚ್ಛವಾಗಿ ಬಿದಿರು ಬೆಳೆಯಬೇಕು ಹಾಗೂ ಕುಡಿಯುವ ನೀರಿನ ಕೊರತೆ ಬಾರದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಕನಕಪುರ ಬಳಿಯ ರೋರಿಚ್ ಎಸ್ಟೇಟ್, ತುರಳ್ಳಿಗುಡ್ಡ, ರಾಮದೇವರಬೆಟ್ಟ, ಕೆಂಗಲ್ ಟ್ರೀಪಾರ್ಕ್ಗೆ ಭೇಟಿ ನೀಡಿದ್ದರು. ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಗಾರ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಾಂತಪ್ಪ, ಡಿಎಫ್ಒ ತಾಕತ್ ಸಿಂಗ್, ಎಸಿಎಫ್ ಲಿಂಗಪ್ಪ, ಆರ್ಎಫ್ಒ ಲಿಂಗರಾಜು ಹಾಜರಿದ್ದರು.