ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆರ್ಥಿಕ ಸ್ಥಿತಿ ಶ್ವೇತಪತ್ರಕ್ಕೆ ಮಾಜಿ ಸಚಿವ ಅಶೋಕ ಆಗ್ರಹ

Vishwanath S
Updated On : 14 Nov 2013, 12:52 pm

ಹೊಸಕೋಟೆ: ಸರಕಾರ ಯಾವುದೇ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು ಆರ್ಥಿಕ ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕುಎಂದು ಮಾಜಿ ಸಚಿವ ಆರ್.ಅಶೋಕ್ ಇಲ್ಲಿ  ಒತ್ತಾಯಿಸಿದರು.
ಪಟ್ಟಣದ ಸುಜಾತ ರವೀಂದ್ರ ಕಲ್ಯಾಣಮಂಟಪದಲ್ಲಿ ಏರ್ಪಡಿಸಿದ್ದ ಬಿಜೆಪಿ ಜಿಲ್ಲಾ ಮಟ್ಟದ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಥಿಕ ಸಂಪನ್ಮೂಲ ಶೇಖರಣೆ ಬಗ್ಗೆ ವಿವರ ನೀಡಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ವಿಫಲವಾಗಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ರಾಜ್ಯದ ಬಹಳಷ್ಟು ಕಡೆ ರಸ್ತೆಗಳ ಹೊಂಡಗಳನ್ನು ಮುಚ್ಚಲು ಸಾಧ್ಯವಾಗದ ಸರಕಾರ ಕೇವಲ ವೋಟ್ ಬ್ಯಾಂಕ್ ರಾಜಕಾರಣದಲ್ಲಿಯೇ ವೃಥಾ ಕಾಲಹರಣ ಮಾಡುತ್ತಿದ್ದು ಕೆಲವು ವರ್ಗದ ಜನರನ್ನು ಓಲೈಸಿಕೊಳ್ಳಲು ಆದ್ಯತೆ ನೀಡುವುದರ ಮೂಲಕ ಜಾತಿ, ಧರ್ಮದ ಆಧಾರದ ಮೇಲೆ ಜನರನ್ನು ಒಡೆದು ಆಳುವ ನೀತಿ ಅನುಸರಿಸಿ ಮುಖ್ಯಮಂತ್ರಿಗಳು ಕೋಮುವಾದಿಯಾಗಿ ಪರಿವರ್ತನೆಯಾಗುತ್ತಿರುವುದಕ್ಕೆ ನಿದರ್ಶನವಾಗಿದೆ ಎಂದರು.
ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತಹ ಯೋಜನೆ ಜಾರಿಗೊಳಿಸಿದಲ್ಲಿ ಮಾತ್ರ ಸಮಾಜದಲ್ಲಿ ಶಾಂತಿ,ನೆಮ್ಮದಿ ಕಾಪಾಡಲು ಸಾಧ್ಯ. ಸರಕಾರ ನಿಷ್ಕ್ರಿಯಗೊಂಡು ಪರಸ್ಪರ ಕಿತ್ತಾಟ, ಭಿನ್ನಾಭಿಪ್ರಾಯಗಳು ಹೆಚ್ಚಾಗಿ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ರಾಸುಗಳಿಗೆ ಕಾಲುಬಾಯಿ ಜ್ವರ ನಿಯಂತ್ರಿಸಲು ಸಾಧ್ಯವಾಗಿದೆ ಘೋಷಿಸಿರುವ ಪರಿಹಾರ ವಿತರಿಸಲು ಸಬೂಬು ಹೇಳಿ ಕಾಲಹರಣ ಮಾಡಲಾಗುತ್ತಿದ್ದು ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಿಂದಿನ ಬಿಜೆಪಿ ಸರಕಾರ ಮಂಜೂರು ಮಾಡಿ ಹಣ ಬಿಡುಗಡೆ ಮಾಡಿದ್ದ ಯೋಜನೆಗಳಿಗಷ್ಟೆ ಶಂಕುಸ್ಥಾಪನೆ,ಚಾಲನೆ ನೀಡುವುದಕ್ಕಷ್ಟೆ ಪ್ರಸ್ತುತ ಸರಕಾರ ಸಾಮಿತಗೊಂಡಿದೆ ಎಂದರು.ಕೇಂದ್ರ ಸರಕಾರದ ನೀತಿಗಳಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದು ಜನಸಾಮಾನ್ಯರು ಜೀವನ ಸಾಗಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ನೂರಾರು ಹಗರಣಗಳೇ ಕೇಂದ್ರ ಸರಕಾರದ ಸಾಧನೆಯಾಗಿದ್ದು ದೇಶದ ಗಡಿ ಭದ್ರತೆ,ಭಯೋತ್ಪಾದನೆ ಚಟುವಟಿಕೆ ತಡೆಗಟ್ಟುವಲ್ಲಿ ಸಹ ವಿಫಲಗೊಂಡಿದ್ದರೂ ಪ್ರಧಾನ ಮಂತ್ರಿಗಳು ಮಾತ್ರ ಮೌನ ಧೋರಣೆ ಅನುಸರಿಸುತ್ತಿದ್ದಾರೆ. ನ.17ರಂದು ಬೆಂಗಳೂರಿನಲ್ಲಿ ನಡೆಯಲಿರುವ ನರೇಂದ್ರ ಮೋದಿ ರ್ಯಾಲಿಗಾಗಿ 35 ತಂಡಗಳನ್ನು ರಚಿಸಿದ್ದು ರಾಜ್ಯಾದ್ಯಂತ ನಾಯಕರು ಪ್ರವಾಸ ಕೈಗೊಂಡಿದ್ದಾರೆ.ಈ ಬಗ್ಗೆ ಪೂರ್ವಸಿದ್ಧತೆಗಾಗಿ ಸಭೆ ನಡೆಸಲಾಗುತ್ತಿದ್ದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಎಲ್ಲಾ ತಾಲೂಕುಗಳಲ್ಲೂ ಹಮ್ಮಿಕೊಳ್ಳಲಾಗುವುದು. ಕ್ಷೇತ್ರದ ಮುಖಂಡರೊಂದಿಗೆ ಚರ್ಚಿಸಿ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುವುದು ಎಂದರು.
ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಸಹ ಮಾತನಾಡಿದರು. ಮಾಜಿ ಶಾಸಕ ನಾಗರಾಜ್, ತಾಲೂಕು ಬಿಜೆಪಿ ಅಧ್ಯಕ್ಷ ಸಿ.ಮುನಿಯಪ್ಪ ಮುಂತಾದವರು ಉಪಸ್ಥಿತರಿದ್ದರು.
ಯಡಿಯೂರಪ್ಪ ಸೇರ್ಪಡೆಗೆ ವೇದಿಕೆ ಸಜ್ಜು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರ್ಪಡೆಗೆ ವೇದಿಕೆ ಸಜ್ಜುಗೊಂಡಿದೆ ಎಂದು ಆರ್. ಅಶೋಕ್ ಪ್ರವಾಸಿ ಮಂದಿರದಲ್ಲಿ  ಸುದ್ದಿಗಾರರಿಗೆ ತಿಳಿಸಿದರು. ದೇಶದ 5 ರಾಜ್ಯಗಳ ಚುನಾವಣೆಯಲ್ಲಿ ನಾಯಕರು ತೊಡಗಿದ್ದು ನಂತರ ಅಂತಿಮ ರೂಪ ಪಡೆಯಲಿದೆ. ರಾಜ್ಯದ ಮುಖಂಡರು ಸಹ ಸೇರ್ಪಡೆಗೆ ಒಮ್ಮತ ಸೂಚಿಸಿದ್ದು ಅಡೆತಡೆಗಳು ನಿವಾರಣೆಗೊಂಡಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 20 ಸ್ಥಾನಗಳನ್ನು ಗಳಿಸಿಕೊಳ್ಳಲಿದೆ. ಗುಜರಾತ್ ಅನ್ನು ದೇಶದಲ್ಲಿಯೇ ಮಾದರಿ ರಾಜ್ಯವನ್ನಾಗಿಸುವಲ್ಲಿ ನರೇಂದ್ರ ಮೋದಿ ಯಶಸ್ವಿಯಾಗಿದ್ದು ರಸ್ತೆ, ನೀರು ಸೌಲಭ್ಯ ಸಮರ್ಪಕವಾಗಿರುವ ಕಾರಣದಿಂದಾಗಿ ಬಂಡವಾಳ ಹೂಡಿಕೆಗೆ ಆಕರ್ಷಣೆಯಾಗಿದ್ದು ಉದ್ಯೋಗವಕಾಶಗಳು ಹೆಚ್ಚಾಗಿವೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement