ಕುಡಿವ ನೀರಿನ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ: ಲೋಕೇಶ್ವರಿ
ಮಾಗಡಿ: ಅಜ್ಜನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಜ್ಜನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಲೋಕೇಶ್ವರಿ ನುಡಿದರು. ಅವರು ಅಜ್ಜನಹಳ್ಳಿ ಪಂಚಾಯ್ತಿ ಆವರಣದಲ್ಲಿ ಏರ್ಪಡಿಸಿದ್ದ ವಿಶೇಷ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಬೇಸಿಗೆ ಕಾಲ ಸಮೀಪಿಸುತ್ತಿದ್ದು, ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದೆ. ಅಗತ್ಯವಿರುವೆಡೆ ಕೊಳವೆ ಬಾವಿ ಕೊರೆಸುವ ಮೂಲಕ ನೀರಿನ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಸಾಮಾಜಿಕ ಅರಣ್ಯಾಧಿಕಾರಿ ಟಿ.ಎಂ. ರಾಕೇಶ್ ಮಾತನಾಡಿ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಅರ್ಹ ಪಲಾನುಭವಿಗಳು ತಪ್ಪದೆ ಜಾಬ್ ಕಾರ್ಡ್ ಮಾಡಿಸಿಕೊಳ್ಳಬೇಕು. ಇದಕ್ಕಾಗಿ ರೈತರುಗಳು ಮೊದಲು ಗ್ರಾಮ ಸಭೆಗಳಿಗೆ ಹಾಜರಾಗುವುದನ್ನು ಬೆಳೆಸಿಕೊಳ್ಳಬೇಕು ಎಂದರು. ಇದೇ ವೇಳೆ ಬಸವ ವಸತಿ ಮತ್ತು ಇಂದಿರಾ ಆವಾಸ್ ಯೋಜನೆ ಅರ್ಹ ಪಲನುಭವಿಗಳ ಪಟ್ಟಿಯನ್ನು ಲಾಟರಿ ಮೂಲಕ ಆಯ್ಕೆಯ ಮಾಡಲಾಯಿತು. ನರೇಗ ಕಾಮಗಾರಿ ಗುಚ್ಚಗಳಿಗೆ ಪಂಚಾಯತಿ ಅನುಮೋದನೆ ಪಡೆಯಿತು. ಪಿಡಿಓ ವೇಣುಗೋಪಾಲ್, ಉಪಾಧ್ಯಕ್ಷೆ ಜಯಮ್ಮ, ಸದಸ್ಯರಾದ ನಂಜುಂಡಪ್ಪ, ಸುಬ್ಬಣ್ಣ, ಗಂಗಾಧರಪ್ಪ, ಶಿವಕುಮಾರ್, ಸುರೇಶ್, ಕುಮಾರ್, ಭೈಲಪ್ಪ, ವೇದಾವತಿ, ಸವಿತಾ ಮಹಾದೇವಯ್ಯ, ಶಿವಣ್ಣ, ರತ್ನಮ್ಮ ಇತರರು ಇದ್ದರು.