ಮಕ್ಕಳ ಪ್ರತಿಭೆ ಅನಾವರಣಗೊಳಿಸಿದ ವಿಜ್ಞಾನ ವಸ್ತು ಪ್ರದರ್ಶನ
ಕ.ಪ್ರ.ವಾರ್ತೆ , ರಾಮನಗರ , ನ.13
ಶಾಲೆ-ಕಾಲೇಜು ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಿದ ವಿಜ್ಞಾನ ವಸ್ತು ಪ್ರದರ್ಶನ... ಮನಸೂರೆಗೊಂಡ ವಿವಿಧ ಸ್ಪರ್ಧಾವಳಿಗಳು... ರೈತಾಪಿ ವರ್ಗಕ್ಕೆ ಆಧುನಿಕ ಬೇಸಾಯ ಪದ್ಧತಿಯ ಜ್ಞಾನದ ಕಣಜ... ಮಹಿಳೆಯರ ಮನಸೂರೆಗೊಂಡ ವಿವಿಧ ಉತ್ಪನ್ನಗಳ ಮಳಿಗೆಗಳು... ಕಣ್ಮನ ಕೋರೈಸಿದ ಜೋಡೆತ್ತು, ಟಗರು, ಹುಂಜದ ಪ್ರದರ್ಶನ... ಸರ್ಕಾರಿ ಇಲಾಖೆ ಮಳಿಗೆಗಳಲ್ಲಿ ಮಾಹಿತಿಯ ಮೆಲಕು...
ಹೀಗೆ ನಾನಾ ವೈಶಿಷ್ಟ್ಯತೆಗಳೊಂದಿಗೆ ಕನಕಪುರದಲ್ಲಿ ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ ಜಿಲ್ಲಾಡಳಿತದಿಂದ ಬುಧವಾರ ಪ್ರಾರಂಭಗೊಂಡ ಐದು ದಿನಗಳ ಕೃಷಿ ಉತ್ಸವ ಕಾರ್ಯಕ್ರಮ ಗಮನ ಸೆಳೆಯಿತು. ಇದರೊಟ್ಟಿಗೆ ಆಯೋಜನೆಗೊಂಡಿರುವ ಕನಕೋತ್ಸವವು ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣವನ್ನು ಉಣಬಡಿಸುವಲ್ಲಿ ಸಫಲವಾಗಿದೆ.
ಕೃಷಿ ಉತ್ಸವ ಮತ್ತು ಕನಕೋತ್ಸವ ಅವಳಿ ಕಾರ್ಯಕ್ರಮವು ಬಹುಶಃ ಜಿಲ್ಲಾ ಮಟ್ಟದಲ್ಲೇ ಅತ್ಯಂತ ವೈವಿಧ್ಯಮಯ ಹಾಗೂ ವೈಭವೋಪೇತವೆನಿಸಿತ್ತು. ಮೊದಲ ದಿನವೇ ಅಬಾಲವೃದ್ಧರಾದಿಯಾಗಿ ಸಹಸ್ರಾರು ಜನರು ರೂರಲ್ ಎಜುಕೇಷನ್ ಸೊಸೈಟಿ ಕಾಲೇಜು ಆವರಣದಲ್ಲಿ ಆಯೋಜನೆಗೊಂಡಿರುವ ಅವಳಿ ಉತ್ಸವದತ್ತ ಹೆಜ್ಜೆ ಹಾಕಿದರು. ಕನಕಪುರದ ಪ್ರಮುಖ ಬೀದಿಗಳಲ್ಲಿ ಎತ್ತ ನೋಡಿದರೂ ಜನ ಸಾಗರವೇ ಕಂಡು ಬಂದಿತು.
ರೈತರಿಗೆ ಮಾಹಿತಿ ಕಣಜ: ಆಧುನಿಕ ಕೃಷಿ ಪದ್ಧತಿ, ಬೇಸಾಯದಲ್ಲಿ ಯಂತ್ರೋಪಕರಣಗಳ ಅಳವಡಿಕೆ, ಹೊಸ ತಳಿಗಳ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿವಿಧ ಮಳಿಗೆಗಳು ತೆರೆದುಕೊಂಡಿದ್ದವು. ಯಂತ್ರೋಪಕರಣಗಳ ಪ್ರದರ್ಶನ, ಪ್ರಾತ್ಯಕ್ಷಿಕೆಯೂ ನಡೆಯಿತು. ಕೃಷಿ ಇಲಾಖೆಯಿಂದ ಶೇಕಡ 50ರಷ್ಟು ಸಬ್ಸಿಡಿ ದರದಲ್ಲಿ ಉಪಕರಣಗಳ ಮಾರಾಟವನ್ನು ಮೇಳದಲ್ಲಿ ಮಾಡಲಾಗುತ್ತಿದೆ.
ರಾಗಿ, ಬತ್ತ, ದ್ವಿದಳ ಧಾನ್ಯಗಳ ಬೇಸಾಯ ಕ್ರಮಗಳು, ತೋಟಗಾರಿಕೆ, ರೇಷ್ಮೆ, ಹೈನೋದ್ಯಮಕ್ಕೆ ಪೂರಕವಾದ ಹೊಸ ಆವಿಷ್ಕಾರಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವ ಪ್ರಯತ್ನ ನಿಜಕ್ಕೂ ಗಮನಾರ್ಹವಾಗಿದೆ. ಹಾಲು ಕರೆಯುವ ಯಂತ್ರ, ಸೋಲಾರ್ ಮೂಲಕ ನೀರೆತ್ತುವ ಮೋಟಾರ್ ಪಂಪ್ ಅಳವಡಿಕೆಯ ಪ್ರಾತ್ಯಕ್ಷಿಕೆ, ಕಳೆ ಕೀಳುವ, ಔಷಧ ಸಿಂಪಡಿಸುವ ಯಂತ್ರಗಳೂ ಇಲ್ಲಿದ್ದವು.
ಮಕ್ಕಳಿಗೆ ವಿಜ್ಞಾನ ಮೇಳ: ರೂರಲ್ ಕಾಲೇಜಿನ ಕೊಠಡಿಗಳಲ್ಲಿ ಕನಕಪುರ ಮಾತ್ರವಲ್ಲದೆ ರಾಮನಗರ ಜಿಲ್ಲೆಯ ವಿವಿಧ ಶಾಲೆಗಳ ಮಕ್ಕಳು ತಯಾರಿಸಿದ ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು. ಆ ಮೂಲಕ ಎಳೆಯ ವಯಸ್ಸಿನ ಮಕ್ಕಳ ಪ್ರತಿಭೆ ಅನಾವರಣಕ್ಕೂ ಇಲ್ಲಿ ವೇದಿಕೆ ಒದಗಿಸಲಾಗಿತ್ತು. ಮಕ್ಕಳಿಗಾಗಿ ಸ್ಥಳದಲ್ಲೇ ಚಿತ್ರಬರೆಯುವ ಸ್ಪರ್ಧೆ, ಹೆಣ್ಣು ಮಕ್ಕಳಿಗಾಗಿ ರಂಗೋಲಿ ಬಿಡಿಸುವ ಸ್ಪರ್ಧೆಗಳಲ್ಲಿ ಸ್ಪರ್ಧಿಗಳ ಪೈಪೋಟಿ ಕಂಡು ಬಂದಿತು.
ರಾಸುಗಳ ಪ್ರದರ್ಶನ: ಆಧುನಿಕತೆ ಮತ್ತು ನಗರೀಕರಣಕ್ಕೆ ಮೈಯೊಡ್ಡಿಡಿರುವ ಕೃಷಿಕರು ಬೇಸಾಯ, ರಾಸುಗಳ ಸಾಕಾಣಿಕೆಗೆ ಬೆನ್ನು ತೋರುತ್ತಿದ್ದಾರೆ. ರಾಸುಗಳ ಸಾಕಾಣಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇಲ್ಲಿ ಜೋಡೆತ್ತುಗಳು, ಬೀಜದ ಹೋರಿಗಳು, ಹುಂಜಗಳು, ಟಗರು, ಹೋತ, ಶ್ವಾನ, ಕುದುರೆಗಳ ಪ್ರದರ್ಶನವನ್ನು ಆಯೋಜಿಸಿ ಅತ್ಯುತ್ತಮ ರಾಸುಗಳಿಗೆ ಬಹುಮಾನ ನೀಡುವ ಕೆಲಸ ಪ್ರಶಂಸೆಗೆ ಪಾತ್ರವಾಯಿತು.
ರು.1 ಲಕ್ಷದಿಂದ ರು.3 ಲಕ್ಷದವರೆಗಿನ ಜೋಡೆತ್ತುಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಆಯೋಜಕರು ರಾಸುಗಳಿಗೆ ಮೇವು, ನೀರು ಸಹಿತ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗಿತ್ತು.
-ಮತ್ತೀಕೆರೆ ಜಯರಾಮ್