ಸರ್ಕಾರಿ ಶಾಲೆಗೆ ಖಾಸಗಿ ಸಹಭಾಗಿತ್ವ ಇರಲಿ: ಸಚಿವ ರಾಮಲಿಂಗಾರೆಡ್ಡಿ
ಕ.ಪ್ರ. ವಾರ್ತೆ , ಆನೇಕಲ್ಲು , ನ.13
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಂಘ ಸಂಸ್ಥೆಗಳು ಹಾಗೂ ದಾನಿಗಳು ಕೈ ಜೋಡಿಸಬೇಕೆಂದು ಸಾರಿಗೆ ಸಚಿವ ಆರ್. ರಾಮಲಿಂಗಾರೆಡ್ಡಿ ಕರೆ ನೀಡಿದ್ದಾರೆ.
ಅವರು ತಾಲೂಕಿನ ಹೆಬ್ಬಗೋಡಿ-ಕಮ್ಮಸಂದ್ರದಲ್ಲಿ ರೌಂಡ್ ಟೇಬಲ್ ಆಫ್ ಇಂಡಿಯಾ, ಗ್ರಾಮ ಪಂಚಾಯ್ತಿ ಹಾಗೂ ಮುಖಂಡ ಕೆ.ಪಿ. ರಾಜು ಅವರ ಸಹಯೋಗದಲ್ಲಿ ನಿರ್ಮಾಣವಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ ಶಿಕ್ಷಣ ಇಲಾಖೆ ಕಟ್ಟಡ ಕಟ್ಟಲು ಹಣ ಬಿಡುಗಡೆ ಮಾಡುತ್ತದೆ. ಹೆಚ್ಚುವರಿ ಕೊಠಡಿಗಳ ನಿರ್ಮಾಣ, ಪೀಠೋಪಕರಣ, ಆಧುನಿಕ ಶಿಕ್ಷಣ ಉಪಕರಣಗಳನ್ನು ಒದಗಿಸುವ ಮೂಲಕ ನಗರ ಹಾಗೂ ಗ್ರಾಮೀಣ ಶಿಕ್ಷಣದ ತಾರತಮ್ಯ ನಿವಾರಿಸಲು ಮುಂದಾಗಬೇಕೆಂದರು.
ಶಾಸಕ ಬಿ. ಶಿವಣ್ಣ ಮಾತನಾಡಿ ತಾಲೂಕಿನಲ್ಲಿ ಹಲವಾರು ಕೈಗಾರಿಕಾ ಮಾಲಿಕರಿದ್ದು ಸರ್ಕಾರಿ ಶಾಲೆಗಳನ್ನು ದತ್ತು ಕೊಡುವ ಬಗ್ಗೆ ಚಿಂತನೆ ನಡೆಸಲಾಗುವುದು. ಕೈಗಾರಿಕೆಗೊಂದರಂತೆ ಶಾಲಾ ದತ್ತು ನೀಡಿ ಖಾಸಗೀ ಸಹಭಾಗಿತ್ವದಿಂದ ಕಾರ್ಯ ನಿರ್ವಹಿಸಲು ಯೋಜನೆ ಸಿದ್ಧಪಡಿಸಲು ತಜ್ಞಾರೊಂದಿಗೆ ಚರ್ಚಿಸಲಾಗುವುದು ಎಂದರು. ಜಿಲ್ಲಾ ಪಂಚಾಯ್ತಿ ಸದಸ್ಯ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ. ರಾಮಚಂದ್ರ ಮಾತನಾಡಿ ನಗರ ಪ್ರದೇಶಿ ಶಿಕ್ಷಣ ಪಡೆದ ವಿದ್ಯಾರ್ಥಿಗಳೊಡನೆ ಪೈಪೋಟಿ ನಡೆಸಲು ಬೇಕಾದ ಶೈಕ್ಷಣಿಕ ವಾತಾವರಣ ನಿರ್ಮಿಸಲು ಶಿಕ್ಷಕರು ಮುಂದಾಗಬೇಕು. ಎಲ್ಲ ರೀತಿಯ ಸಹಕಾರವನ್ನು ಜಿಲ್ಲಾ ಪಂಚಾಯ್ತಿ ವತಿಯಿಂದ ನೀಡಲಾಗುವುದು ಎಂದರು.
ಮುಖಂಡ ಕೆ. ಪಿ. ರಾಜು ಮಾತನಾಡಿ ಗುಣ ಮಟ್ಟದ ಶಿಕ್ಷಣ ನೀಡುವಲ್ಲಿ ಉತ್ತಮ ಕಟ್ಟಡವೂ ಮುಖ್ಯ ಪಾತ್ರಿ ವಹಿಸುತ್ತಿದ್ದು ರೂ. 48 ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ ಶಾಲಾ ಕಟ್ಟಡ ನಿರ್ಮಿಸಲಾಗಿದೆ ಎಂದರು.