ಆರ್ಥಿಕ ಸ್ವಾವಲಂಬನೆಯೊಂದಿಗೆ ಸರ್ವತೋಮುಖ ಅಭಿವೃದ್ಧಿ ಸಾಧ್ಯ
ವಿಜಯಪುರ: ಪ್ರತಿ ಮನೆಯಲ್ಲೂ ಶೌಚಾಲಯವಿರಬೇಕು ಎನ್ನುವ ಉದ್ದೇಶದಿಂದ ಎಸ್‌ಇ, ಎಸ್‌ಟಿ ಅನುದಾನ ಹಾಗೂ ನರೇಗ ಯೋಜನೆಯಲ್ಲಿ ಸರ್ಕಾರದ ನೆರವು ಸಿಗುತ್ತಲಿದೆ. ಇದರ ಬಗ್ಗೆ ಗ್ರಾಮ ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಿ ಅನುಕೂಲ ಪಡೆದುಕೊಳ್ಳಬೇಕು ಎಂದು ದೇವನಹಳ್ಳಿ ಕ್ಷೇತ್ರ ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು.
ಅವರು ಪಟ್ಟಣ ಸಮೀಪದ ಬಿಜ್ಜವಾರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರಿಂದ ಏರ್ಪಡಿಸಿದ್ದ ಗ್ರಾಮ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಯೋಜನಾಧಿಕಾರಿ ಶಿವಾನಂದ್ ಆಚಾರ್ಯ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಗೃಹ ನಿರ್ಮಾಣ ಸ್ವಉದ್ಯೋಗ ಬದಲಿ ಇಂಧನ ವ್ಯವಸ್ಥೆಯ ಸೋಲಾರ್, ಗೋಬರ್ ಗ್ಯಾಸ್ ಅಳವಡಿಕೆ, ಶುದ್ಧಿ ಕುಡಿಯುವ ನೀರಿನ ವ್ಯವಸ್ಥೆ ವೃದ್ಧಾಪ್ಯದ ಪಿಂಚಣಿ ಯೋಜನೆಯ ಹಾದಿ ಪರಿಸರ ಕಾರ್ಯಕ್ರಮ ಸಮಾಜ ಸುಧಾರಣೆಗೆ ಅನುಕೂಲವಾಗುವ ರೀತಿಯ ಜನ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ವಿವರಣೆ ನೀಡಿದರು.
ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಯೋಜನೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿಂದು ಆಂಜಿನಪ್ಪ ವಹಿಸಿದ್ದರು. ಹತ್ತು ಮನಸ್ಸುಗಳು ಒಂದಾಗಿ ಆತ್ಮೀಯತೆಯಿಂದ ದುಡಿದಲ್ಲಿ ಆರ್ಥಿಕ ಸ್ವಾವಲಂಬನೆಯೊಂದಿಗೆ ಸರ್ವತೋಮುಖ ಅಭಿವೃದ್ಧಿ ಸುಲಭ ಸಾಧ್ಯ ಎನ್ನುವ ನಾಣ್ಣುಡಿಯೊಂದಿಗೆ ಕಾರ್ಯಕ್ರಮ ನಡೆಯಿತು.
ತಾ.ಪಂ.ಸದಸ್ಯ ಮಂಜುಳಾಶ್ರೀನಿವಾಸ್, ಯೋಜನಾಧಿಕಾರಿ ಸುರೇಶ್ ಮಗರೂಡಿ, ಬಿಜ್ಜವಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಜಿ. ಸುಧಾಕರ್ ರೆಡ್ಡಿ, ಕಾರ್ಯದರ್ಶಿ ನರಸಿಂಹಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯ ಬಿ.ಆರ್. ಚೌಡಪ್ಪ, ಬಿಜ್ಜವಾರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹೆಚ್.ಟಿ.ಮುನಿಯಪ್ಪ ಮತ್ತಿತರರು ಭಾಗವಹಿಸಿದ್ದರು.