ಎಳನೀರು ನೇರ ಮಾರಾಟ ಕೇಂದ್ರ ಪ್ರಾರಂಭ
ರಾಮನಗರ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣದಲ್ಲಿ ಎಳೆನೀರಿನ ನೇರ ಮಾರಾಟ ಕೇಂದ್ರ ಪ್ರಾರಂಭವಾಗಿದೆ. ತೆಂಗು ಉತ್ಪಾದಕರ ಒಕ್ಕೂಟದ ವತಿಯಿಂದ ಪ್ರಾರಂಭಿಸಲಾದ ಈ ಮಾರಾಟ ಕೇಂದ್ರಕ್ಕೆ ಎಪಿಎಂಸಿ ಕಾರ್ಯದರ್ಶಿ ರಾಜಮ್ಮ ಶುಕ್ರವಾರ ಚಾಲನೆ ನೀಡಿದ್ದಾರೆ.
ಎಳೆನೀರು ಖರೀದಿಯಲ್ಲಿ ದಲ್ಲಾಳಿಗಳಿಂದ ಆಗುತ್ತಿದ್ದ ರೈತರ ಶೋಷಣೆ ತಪ್ಪಿಸುವ ನಿಟ್ಟಿನಲ್ಲಿ ನೇರ ಮಾರಾಟ ಕೇಂದ್ರವನ್ನು ತೆಂಗು ಉತ್ಪಾದಕರ ಒಕ್ಕೂಟ ಪ್ರಾರಂಭಿಸಿದೆ. ಇದೂ ಸಹಿತ 11 ಕೇಂದ್ರಗಳು ಈ ಜಿಲ್ಲೆಯಲ್ಲಿ ಪ್ರಾರಂಭವಾಗಿವೆ.
ಈ ಕೇಂದ್ರಕ್ಕೆ ರೈತರಿಂದ ನೇರವಾಗಿ ಎಳೆನೀರು ಖರೀದಿಸಿಕೊಂಡು ಬರಲಾಗುವುದು. ದಲ್ಲಾಳಿಗಳು ಪ್ರತಿ ಎಳೆನೀರಿಗೆ ರು.5-6 ಪಾವತಿಸುತ್ತಿದ್ದರೆ, ಮಾರಾಟ ಕೇಂದ್ರವು ರು.12ರವರೆಗೆ ನೀಡಲಿದೆ. ಅತಿ ಕನಿಷ್ಠ ದರದ ಸಾಗಣೆ ವೆಚ್ಚವನ್ನು ರೈತರಿಂದ ಪಡೆದುಕೊಳ್ಳಲಾಗುವುದು.
ಮಾರಾಟ ಕೇಂದ್ರದಲ್ಲಿ ಪ್ರತಿ ಎಳೆನೀರು ಬೆಲೆ ಗರಿಷ್ಠ ರು.15 ಆಗಿರುತ್ತದೆ. ಈ ಕ್ರಮದೊಂದಿಗೆ ಒಕ್ಕೂಟವು ರೈತರು ಮತ್ತು ಗ್ರಾಹಕರ ಸ್ನೇಹಿಯಾಗಿ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ತೆಂಗು ಮತ್ತು ಕೊಬ್ಬರಿ ಉತ್ಪನ್ನಗಳ ಖರೀದಿ ಕೇಂದ್ರ ಪ್ರಾರಂಭಿಸುವ ಚಿಂತನೆಯೂ ಇದೆ ಎಂದು ಒಕ್ಕೂಟದ ಪದಾಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲೀಗ ಜಾನಪದ ಲೋಕ, ರಾಮನಗರ ಎಪಿಎಂಸಿ ಹಾಗೂ ಬಿಡದಿ ಪಟ್ಟಣದಲ್ಲಿ ಎಳೆನೀರು ಮಾರಾಟ ಕೇಂದ್ರ ಪ್ರಾರಂಭವಾಗಿದೆ. ಎಳನೀರನ್ನು ಕೊಚ್ಚುವುದು ಮತ್ತು ಕತ್ತರಿಸಲು ಯಂತ್ರ ಬಳಸಲಾಗುತ್ತಿದೆ.
ತೆಂಗು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಆರ್.ಚಿಕ್ಕಬೈರೇಗೌಡ, ಜಿಲ್ಲಾ ತೆಂಗು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ವಿ.ಎಸ್. ಸುಜೀವನ್ ಕುಮಾರ್, ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಕೆ. ಮಲ್ಲಯ್ಯ, ಪದಾಧಿಕಾರಿಗಳಾದ ಜೋಗಯ್ಯ, ಬಾಲಾಜಿ, ಕೃಷ್ಣಪ್ಪ, ಪುಟ್ಟಸ್ವಾಮೇಗೌಡ ಭಾಗವಹಿಸಿದ್ದರು.