ಘಾಟಿ ಸುಬ್ರಹ್ಮಣ್ಯದಲ್ಲಿ ನಮೋ ಬ್ರಿಗೇಡ್ ಪೂಜೆ
ಕ.ಪ್ರ.ವಾರ್ತೆ , ದೊಡ್ಡಬಳ್ಳಾಪುರ , ನ.15
ಬೆಂಗಳೂರಿನಲ್ಲಿ ಬೃಹತ್ ಸಮಾವೇಶಕ್ಕಾಗಿ ಆಗಮಿಸುತ್ತಿರುವ ನರೇಂದ್ರಮೋದಿ ಅವರಿಗೆ ಶುಭವಾಗಲಿ. ಮುಂಬರುವ ದಿನಗಳಲ್ಲಿ ಮೋದಿ ಈ ದೇಶದ ಪ್ರಧಾನಿಯಾಗಿ ಹೊರಹೊಮ್ಮಲಿ ಎಂದು ಹಾರೈಸಿ ಇಲ್ಲಿನ ಸುಪ್ರಸಿದ್ಧ ಪುಣ್ಯಕ್ಷೇತ್ರ ಘಾಟಿ ಸುಬ್ರಹ್ಮಣ್ಯದಲ್ಲಿ ದೊಡ್ಡಬಳ್ಳಾಪುರ ತಾಲೂಕು ನಮೋ ಬ್ರಿಗೇಡ್ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಪೂಜೆ ನಂತರ ಮಾತನಾಡಿದ ನಮೋ ಬ್ರಿಗೇಡ್ನ ಮುಖಂಡರು, ಒಬ್ಬ ಹಿಂದುಳಿದ ವರ್ಗದ ನೇತಾರನಾಗಿ, ಜಾತ್ಯತೀತ ಮನೋಭಾವದಿಂದ ಗುಜರಾತಿನಲ್ಲಿ ಸತತ 3 ಬಾರಿ ಮುಖ್ಯಮಂತ್ರಿಯಾಗಿ ಪ್ರಪಂಚವೇ ಗುರುತಿ ಸುವ ಗಣನೀಯ ಸಾಧನೆ ಮಾಡಿರುವ ನರೇಂದ್ರ ಮೋದಿ ಈ ದೇಶವನ್ನು ಸದೃಢವಾಗಿ ಕಟ್ಟಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೇಶ ಭಯೋತ್ಪಾದನೆ, ಹಿಂಸೆ, ವರ್ಗ ಸಂಘರ್ಷದಿಂದ ನಲುಗುತ್ತಿದೆ. ಸ್ವಜನಹೀತ, ಸ್ವಾರ್ಥಗಳು ಎದ್ದು ಕಾಣುತ್ತಿದ್ದು ಪ್ರಜಾಪ್ರಭುತ್ವದ ಆಶಯಗಳು ನೆಲಕಚ್ಚಿವೆ. ನಿರಂತರವಾಗಿ ದೇಶದ ಮೇಲೆ ಭಯೋತ್ಪಾದಕ ದಾಳಿಗಳು ನಡೆಯುತ್ತಿದ್ದರೂ ನಮ್ಮ ಕೇಂದ್ರ ಸರ್ಕಾರ ಕೈಕಟ್ಟಿ ಕುಳಿತಿದೆ. ಭ್ರಷ್ಟಾಚಾರದಲ್ಲೇ ಮುಳುಗೇಳುತ್ತಿರುವ ಯುಪಿಎ ಸರ್ಕಾರ ಜನ ಬೆಂಬಲ ಕಳೆದುಕೊಂಡಿದೆ. ಮುಂದಿನ ಚುನಾವಣೆಯಲ್ಲಿ ದೇಶ ಮೋದಿ ನಾಯಕತ್ವವನ್ನು ಬಯಸುತ್ತಿದೆ ಎಂದರು.
ಈ ನಿಟ್ಟಿನಲ್ಲಿ ದೇಶದ ಯುವಕರು ಇಂದು ಎಚ್ಚೆತ್ತುಕೊಂಡಿದ್ದು ಸಮರ್ಥನಾಯಕನ ಆಯ್ಕೆಗೆ ಒತ್ತು ನೀಡಿದ್ದಾರೆ. ಗ್ರಾಮ ಮಟ್ಟದಿಂದ ದಿಲ್ಲಿಯವರೆಗೆ ಎಲ್ಲರಲ್ಲೂ ಮೋದಿ ಸಂಚಲನೆ ಸೃಷ್ಟಿಸಿದ್ದಾರೆ. ಹೀಗಾಗಿ ಎಲ್ಲರೂ ಮೋದಿಯನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಮಾವೇಶಕ್ಕೆ ವ್ಯವಸ್ಥೆ: ಬೆಂಗಳೂರಿನ ಅರಮನೆ ಮೈದಾನದಲ್ಲಿ ನ.17ರ ಭಾನುವಾರ ನಡೆಯಲಿರುವ ನರೇಂದ್ರ ಮೋದಿ ಅವರ ಭಾರತ ಗೆಲ್ಲಿಸಿ ಬೃಹತ್ ಸಮಾವೇಶಕ್ಕೆ ದೊಡ್ಡಬಳ್ಳಾಪುರ ನಗರದಿಂದ 100ಕ್ಕೂ ಹೆಚ್ಚು ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಸಮಾವೇಶದ ಪಾಸುಗಳನ್ನು ವಿತರಿಸುವ ಕಾರ್ಯ ಭರದಿಂದ ನಡೆದಿದೆ.