ದುಷ್ಟ ಶಕ್ತಿ ಮಟ್ಟ ಹಾಕಲು ಪೊಲೀಸರು ಬದ್ಧ: ಕಿಶೋರ್
ಕ.ಪ್ರ. ವಾರ್ತ್ಣೆ ಆನೇಕಲ್ಲು , ನ.15
ಸಮಾಜ ಘಾತುಕ ದುಷ್ಟಶಕ್ತಿಗಳನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಸಜ್ಜುಗೊಂಡಿದ್ದು ಸಾರ್ವಜನಿಕರು ನೆಮ್ಮದಿಯ ಜೀವನ ನಡೆಸಬಹುದೆಂದು ಅತ್ತಿಬೆಲೆ ವೃತ್ತ ನಿರೀಕ್ಷಕ ಬಿ.ಕೆ. ಕಿಶೋರ್ ತಿಳಿಸಿದ್ದಾರೆ.
ಅವರು ತಾಲೂಕಿನ ಬೆಸ್ತಮಾನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಪೊಲೀಸರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿ ಸಮಾಜ ಘಾತುಕ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರು ನಿರ್ಭಿಡೆಯಿಂದ ಠಾಣೆಗೆ ಮಾಹಿತಿ ನೀಡಬೇಕೆಂದರು.
ಪ್ರತಿ ವ್ಯಕ್ತಿಯಲ್ಲೂ ಒಳ್ಳೆಯದು ಕೆಟ್ಟದ್ದು ಎಂಬ ನಡತೆ ಇರುತ್ತದೆ. ದುಶ್ಚಟಗಳನ್ನು ರೂಢಿಸಿಕೊಂಡು ಜನರಿಗೆ ತೊಂದರೆ ಕೊಡುವ ವ್ಯಕ್ತಿಗಳು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೌಡಿ ಪಟ್ಟಿಯಲ್ಲಿರುವ ಕೆಲವರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಲಾಗುತ್ತಿದೆ. ಅಲ್ಲದೇ ರಾತ್ರಿ ವೇಳೆಯಲ್ಲಿ ರೌಡಿಗಳ ಮನೆ ತಪಾಸಣೆ ಮಾಡುವುದೂ ನಡೆದಿದೆ. ಅಪಾಯಕಾರಿ ವಸ್ತುಗಳು ಹಾಗೂ ಆಯುಧಗಳು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು. ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರನ್ನು ಇದೇ ರೀತಿಯ ವಿಚಾರಣೆಗೊಳಪಡಿಸಲಾಗುವುದು. ಯಾರದೋ ಜಮೀನಿಗೆ ಕಾಂಪೌಂಡ್ ಹಾಕುವುದು, ಯಾರದೋ ಚಿತಾವಣೆಯಿಂದ ಬೇಲಿ ಕೀಳುವುದು, ದೌರ್ಜನ್ಯದಿಂದ ವರ್ತಿಸುವ ಅಸಹ್ಯಕರ ಕೆಲಸ ಬಿಡದಿದ್ದಲ್ಲಿ ಕಾನೂನು ಕ್ರಮ ಎದುರಿಸಿಬೇಕಾಗುತ್ತದೆ ಎಂದರು.
ಆರೋಗ್ಯವಂತ ಸಮಾಜ ನಿರ್ಮಾಣ ಕಾರ್ಯದಲ್ಲಿ ಗ್ರಾಮಸ್ಥರೂ ಕೈ ಜೋಡಿಸಬೇಕೆಂದು ತಿಳಿಸಿದ ಅವರು ಪರಸ್ಪರ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಗ್ರಾಮದಲ್ಲಿ ಶಾಂತಿ ನೆಲೆಸಲು ಸಹಕಾರ ನೀಡಬೇಕೆಂದರು.
ಅತ್ತಿಬೆಲೆ ಪಿಎಸ್ಐ ಚೇತನ್ ಕುಮಾರ್ ಮಾತನಾಡಿ ಗಾರ್ಮೆಂಟ್ ಮತ್ತು ಇತರೇ ಕೈಗಾರಿಕೆಗಳಿಗೆ ತೆರಳುವ ಹೆಣ್ಣು ಮಕ್ಕಳು ಹಾಗೂ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗುವುದು. ಬಸ್ಸ್ಟಾಂಡ್, ಜನಿನಿಬಿಡ ಪ್ರದೇಶ ಹಾಗೂ ಒಂಟಿ ಮನೆ ಇರುವ ಕಡೆ ವಿಶೇಷ ನಿಗಾ ಇಡಲಾಗುವುದು. ಪೊಲೀಸರು ಜನ ಸ್ನೇಹಿಯಾಗಿದ್ದು ಸಾರ್ವಜನಿಕರು ಅವಶ್ಯ ಇದ್ದಲ್ಲಿ ಠಾಣೆಗೂ ಬರಬಹುದೆಂದು ಧೈರ್ಯ ತುಂಬಿದರು.
ಗ್ರಾಮಸ್ಥರು ಮಾತನಾಡಿ ಜಮೀನಿಗೆ ಬೆಲೆ ಬಂದ ಕಾರಣ ಹಳ್ಳಿ ಹಳ್ಳಿಗಳಲ್ಲಿ ಸಮಸ್ಯೆಗಳು ಕಂಡು ಬಂದಿದೆ. ಪೊಲೀಸರು ಠಾಣೆಗೆ ಬಂದ ವ್ಯಾಜ್ಯಗಳನ್ನು ಸೌಹಾರ್ದವಾಗಿ ಹಾಗೂ ನ್ಯಾಯಯುತವಾಗಿ ಪರಿಹರಿಸಿಕೊಡಬೇಕೆಂದು ಮನವಿ ಮಾಡಿದರು.
ಕರ್ಪೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಯಲ್ಲಪ್ಪ, ಸದಸ್ಯ ಬಿ. ಎ. ಮಾದೇಶ್, ಯಲ್ಲಪ್ಪ, ತಿಮ್ಮರಾಯಪ್ಪ, ಮುನಿಯಪ್ಪ ಇದ್ದರು.