ಧಾರ್ಮಿಕ ಆಚರಣೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ
ಕ.ಪ್ರ.ವಾರ್ತೆ , ಮಾಗಡಿ , ನ.15
ಧಾರ್ಮಿಕ ಆಚರಣೆಯಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಲಭಿಸುತ್ತದೆ ಎಂದು ಶ್ರೀರಂಗ ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಎಸ್. ಸತೀಶ್ ತಿಳಿಸಿದರು.
ಅವರು ಇತಿಹಾಸ ಪ್ರಸಿದ್ಧ ತಿರುಮಲೆ ಶ್ರೀರಂಗನಾಥಸ್ವಾಮಿ ದೇವಸ್ಥಾನದಲ್ಲಿ ನೂತನ ಪಂಚಲೋಹದ ಶ್ರೀರಾಮಾನುಜಾಚಾರ್ ಸೇರಿದಂತೆ ಆಳ್ವರ್ಗಳ ಮೂರ್ತಿಗಳನ್ನು ಪ್ರತಿಷ್ಠಾಪನಾ ಮಹೋತ್ಸವ ನೆರವೇರಿಸಿ ಮಾತನಾಡುತ್ತಾ ಶ್ರೀರಂಗನಾಥಸ್ವಾಮಿಯ ಶ್ರೇಷ್ಠ ಭಕ್ತ ರಾಮಾನುಜಾಚಾರ್ ಮತ್ತು ಅಳ್ವರ್ಗಳ ಸೇವೆ ಅನನ್ಯವಾದುದು, ಅವರ ಪ್ರತಿಷ್ಠಾಪನೆ ನಿಜಕ್ಕೂ ನಮ್ಮ ಪುಣ್ಯ ಎಂದರು.
ನೆಮ್ಮದಿಯ ತಾಣ ಎಂದು ನಾವು ಎಲ್ಲಿಗೆ ಬರುತ್ತೇವೆಯೋ ಆ ಪುಣ್ಯ ಸ್ಥಳಗಳು ಅಶಾಂತಿ ಸ್ಥಳವಾಗಿ ಮಾರ್ಪಾಟಾಗುತ್ತಿರುವುದು ನಿಜಕ್ಕೂ ಭಕ್ತರ ದೌರ್ಭಾಗ್ಯ. ದೇವಾಲಯಗಳು ಭಕ್ತರ ಶಾಂತಿ ಕೇಂದ್ರಗಳಾಗಬೇಕೇ ಹೊರತು ಅಶಾಂತಿ ಸಲ್ಲದು ಎಂದರು.
ಶ್ರೀರಂಗನಾಥಸ್ವಾಮಿಗೆ ಕೋಟಿ ರು. ವೆಚ್ಚದ ವಜ್ರ ಖಚಿತ ಬಂಗಾರದ ಕಿರೀಟಧಾರಣೆ ನನಗೆ ಸಂತೋಷ, ಸಮಾಧಾನ ತಂದುಕೊಟ್ಟಿದೆ ಎಂದು ಸತೀಶ್ ತಿಳಿಸಿದರು.
ಇದೇ ಸಂದರ್ಭದಲ್ಲಿ 25ಕ್ಕೂ ಹೆಚ್ಚು ಪುರೋಹಿತರು ಆಳ್ವರ್ಗಳ ಪ್ರತಿಷ್ಠಾಪನೆಯನ್ನು ಶಾಸ್ತ್ರೋತ್ತವಾಗಿ ನಡೆಸಿಕೊಟ್ಟರು.ಇದಕ್ಕೂ ಮುನ್ನಾ ಹೋಮ, ಹವನ ಪೂಜೆ ನಡೆಸಿಕೊಟ್ಟರು. ಯಮುನಾ ರಾಮಪ್ರಿಯ ಅವರಿಂದ ದೇವರ ಕುರಿತು ಗೀತಗಾಯನ ನಡೆಯಿತು. ಟಿ.ಎಸ್. ವೆಂಕಟೇಶ್ ಅಯ್ಯಂಗಾರ್, ಟಿ.ಎಸ್. ಪ್ರಭು, ನಾಗರಾಜು, ಶ್ರೀರಂಗ, ನಾರಾಯಾಣಸ್ವಾಮಿ, ಕೆ.ಎಸ್. ಹರೀಶ್, ಪ್ರಕಾಶ್, ರವಿಕುಮಾರ್, ಶೇಷಗಿರಿ, ಸುದರ್ಶನ್, ಹೊಸಪೇಟೆ ರಾಜು,ರಾಮು, ಚಂದ್ರಶೇಖರ್, ಟಿ.ಎಸ್. ಬಾಲರಾಜು ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.
ಇದೇ ವೇಳೆ ಶ್ರೀನಿವಾಸ ಕಲ್ಯಾಣ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಅರ್ಚಕರ ಮರಾಮಾರಿ: ದೇವಾಲಯದಲ್ಲಿ ನಡೆಯುತ್ತಿದ್ದ ಆಳ್ವರ್ಗಳ ಪ್ರತಿಷ್ಠಾಪನೆ ಮಹೋತ್ಸವದಲ್ಲಿ ಅರ್ಚಕರು ವೈಯಕ್ತಿಕ ವಿಚಾರವಾಗಿ ಭಕ್ತರ ಸಮ್ಮುಖದಲ್ಲಿ ಪರಸ್ಪರ ಮರಾಮಾರಿ ನಡೆದು, ಭಕ್ತರ ಕೆಂಗಣ್ಣಿಗೆ ಅರ್ಚಕರು ಗುರಿಯಾದರು. ಈ ಘಟನೆಯನ್ನು ಸೇರಿದ್ದ ಭಕ್ತರು ಖಂಡಿಸಿದರು.
ಭೇಟಿ: ತಹಸೀಲ್ದಾರ್ ಶಿವಕುಮಾರ್ ಮತ್ತು ಶಿರಸ್ದೇದಾರ್ ಗುರುಲಿಂಗಯ್ಯ, ಗ್ರಾಮಲೆಕ್ಕಾಧಿಕಾರಿ ವೆಂಕಟೇಶ್ದೇವಾಲಯದಲ್ಲಿ ನಡೆದ ಅರ್ಚಕರ ಮರಾಮಾರಿ ಸ್ಥಳಕ್ಕೆ ಭೇಟಿ ನೀಡಿ ಅರ್ಚಕರೊಂದಿಗೆ ಚರ್ಚಿಸಿದರು. ನಂತರ ರಾಜಿ ಸಂದಾನ ಮೂಲಕ ದೇವಾಲಯದಲ್ಲಿನ ಪಾವಿತ್ರ್ಯತೆ ಮತ್ತು ಶಾಂತಿ ಕಾಪಾಡಿಕೊಂಡು ಬರುವಂತೆ ಅರ್ಚಕರಿಗೆ ತಹಸೀಲ್ದಾರ್ ತಾಕೀತು ಮಾಡಿದರು.
ಈ ವೇಳೆ ಪೂಜಾ ಕೈಂಕರ್ಯಗಳ ವೆಚ್ಚಗಳನ್ನು ಸರ್ಕಾರದ ನಿಯಮ ಉಲ್ಲಂಘಿಸಿ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಭಕ್ತರು ತಹಸೀಲ್ದಾರ್ ಗಮನಕ್ಕೆ ತಂದರು. ಈ ಬಗ್ಗೆ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ತಿಳಿಸಿದರು.