ಮಧುಮೇಹಿಗಳ ಬೀಡಾಗುತ್ತಿರುವ ಭಾರತ: ಆತಂಕ
ಕ.ಪ್ರ.ವಾರ್ತೆ , ದೊಡ್ಡಬಳ್ಳಾಪುರ , ನ.15
ಇಲ್ಲಿನ ಶ್ರೀರಾಮ ಆಸ್ಪತ್ರೆ, ಅಭಿಷೇಕ್ ನೇತ್ರಧಾಮ ಮತ್ತು ಲಯನ್ಸ್ ಕ್ಲಬ್ಗಳ ಸಹಯೋಗದಲ್ಲಿ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಮಧುಮೇಹ ಕುರಿತ ಜಾಗೃತಿ ಮೂಡಿಸುವ ಸೈಕಲ್ ಜಾಥಾ ಮತ್ತು ಮಧುಮೇಹ ಮೇಳ ಏರ್ಪಡಿಸಲಾಗಿತ್ತು.
ಜಯಚಾಮರಾಜೇಂದ್ರ ವೃತ್ತದಲ್ಲಿರುವ ಶ್ರೀನೆಲದಾಂಜನೇಯಸ್ವಾಮಿ ದೇವಾಲಯ ಮುಂಭಾಗದಿಂದ ಹೊರಟ ಸೈಕಲ್ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಧುಮೇಹ ರೋಗದ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿತು.
ಕಾರ್ಯಕ್ರಮವನ್ನು ಶಾಸಕ ಟಿ.ವೆಂಕಟರಮಣಯ್ಯ ಉದ್ಘಾಟಿಸಿದರು. ಅವರು ಮಾತನಾಡಿ, ಡಯಾಬಿಟಿಸ್ ಇಂದು ಅತ್ಯಂತ ಸಾಮಾನ್ಯ ಕಾಯಿಲೆಯಾಗಿ ಭಾರತ ದೇಶದಲ್ಲಿ ಕಂಡುಬರುತ್ತಿದೆ. ದಿನೇ ದಿನೇ ಮಧುಮೇಹಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಇದು ಆತಂಕಕಾರಿಯಾದ ಬೆಳವಣಿಗೆ. ಎಚ್ಚರಿಕೆ, ಮುಂಜಾಗರೂಕತೆ, ಸೂಕ್ತ ಚಿಕಿತ್ಸಾ ವಿಧಾನಗಳಷ್ಟೇ ಮಧುಮೇಹ ನಿಯಂತ್ರಣ ಮತ್ತು ಬಾರದಂತೆ ತಡೆಯಲು ಇರುವ ಪರಿಹಾರಗಳು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ಪಂಚಾಯಿತಿ ಸದಸ್ಯ ಡಾ.ಎಚ್.ಜಿ.ವಿಜಯಕುಮಾರ್, ಭಾರತದಲ್ಲಿ ಶೇ.20 ಜನರಲ್ಲಿ ಮಧುಮೇಹದ ಲಕ್ಷಣಗಳು ಗೋಚರಿಸುತ್ತವೆ. ಒತ್ತಡದ ಬದುಕು, ದೈಹಿಕ ಚಟುವಟಿಕೆಗಳ ಕಡೆಗಣನೆ, ಅನಿಯಮಿತ ಆಹಾರ ಪದ್ಧತಿ, ಅವೈಜ್ಞಾನಿಕ ಜೀವನ ಶೈಲಿ ಮತ್ತು ಖಿನ್ನತೆಗಳು ಮಧುಮೇಹ ವೃದ್ಧಿಗೆ ಕಾರಣಗಳಾಗಿವೆ. ಆರಂಭಿಕ ಹಂತದಲ್ಲೇ ರೋಗ ಪತ್ತೆ ಹಚ್ಚಿ ಸೂಕ್ತ ಮಾರ್ಗದರ್ಶನ ಮತ್ತು ಚಿಕಿತ್ಸೆ ಪಡೆದರೆ ರೋಗ ಹೆಚ್ಚದಂತೆ ನಿಯಂತ್ರಣದಲ್ಲಿಡಬಹುದು. ಈ ಬಗ್ಗೆ ಎಲ್ಲರೂ ಗಮನ ಹರಿಸಬೇಕು. ಆಹಾರ ಪದ್ಧತಿಯ ಶಿಸ್ತು ರೋಗ ನಿಯಂತ್ರಣಕ್ಕೆ ರಾಮಬಾಣ ಎಂದರು.
ಕಾರ್ಯಕ್ರಮದ ಅಂಗವಾಗಿ ನಡೆದ ಮಧುಮೇಹ ಮೇಳದಲ್ಲಿ ಉಚಿತ ರಕ್ತ ಪರೀಕ್ಷೆ, ವಿವಿಧ ತಪಾಸಣೆಗಳನ್ನು ನಡೆಸಲಾಯಿತು. ಜಾಥಾ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶ ಲಯನ್ಸ್ ಕ್ಲಬ್ನ ಅಧ್ಯಕ್ಷ ಬಿ.ಎಚ್.ಕೆಂಪಣ್ಣ, ನಗರಸಭಾಸದಸ್ಯ ತ.ನ.ಪ್ರಭುದೇವ್, ತಾಲೂಕು ಪಂಚಾಯಿತಿ ಸದಸ್ಯ ಕೆ.ಮುನಿಯಪ್ಪ, ಅಭಿಷೇಕ್ ನೇತ್ರಧಾಮದ ಡಾ.ಕೆ.ವಿ.ಹರೀಶ್, ಲಯನ್ಸ್ ಕ್ಲಬ್ನ ಮುಖಂಡರಾದ ಎಳ್ಳುಪುರ ರಾಮಾಂಜಿನಪ್ಪ, ಆರ್.ಎನ್.ನಾಗರಾಜ್, ವೆಂಕಟೇಶಮೂರ್ತಿ ಭಾಗವಹಿಸಿದ್ದರು.