ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸರಕಾರಿ ಜಾಗ ಒತ್ತುವರಿ ತೆರವು ಕಾರ್ಯಾಚರಣೆ

Vishwanath S
Updated On : 16 Nov 2013, 12:59 pm

ಹೊಸಕೋಟೆ: ಪಟ್ಟಣದ ಸಮೀಪದ ಅಮಾನಿದೊಡ್ಡಕೆರೆ ಅಂಗಳದಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದ ಸರಕಾರಿ ಜಾಗದ ತೆರವಿಗೆ ಕಾರ್ಯಚರಣೆ ನಡೆಯಿತು.
ಜಿಲ್ಲಾಧಿಕಾರಿ ವಿ.ಶಂಕರ್ ಕಾರ್ಯಾಚರಣೆಯ ನೇತೃತ್ವ ವಹಿಸಿದರು.
ಈ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ  ಸ್ಥಳದಲ್ಲಿ ಕೆರೆ ಅಂಗಳದ ಪಕ್ಕ ಜಮೀನುಗಳನ್ನು ಹೊಂದಿರುವ 25ಕ್ಕೂ ಹೆಚ್ಚು ರೈತರು ಒತ್ತುವರಿ ಮಾಡಿಕೊಂಡಿದ್ದರು. ಸುಮಾರು 2-3 ವರ್ಷಗಳ ಹಿಂದಿನಿಂದಲೂ ಒತ್ತುವರಿ ತೆರವಿಗೆ ರೈತರಿಗೆ ನೋಟಿಸ್ ನೀಡಲಾಗಿತ್ತು. ಸಾರ್ವಜನಿಕರಿಂದ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿತ್ತು. ಬೆಳೆ ಕಟಾವಿನ ನಂತರ ಬಿಟ್ಟುಕೊಡುವುದಾಗಿ ತಿಳಿಸಿದ್ದ ರೈತರು ತೆರವುಗೊಳಿಸುವಲ್ಲಿ ವಿಫಲವಾಗಿದ್ದರು ಎಂದರು.
ದೊಡ್ಡಅಮಾನಿಕೆರೆಯ ವಿಸ್ತೀರ್ಣದಲ್ಲಿ 808.14 ಎಕರೆಯಷ್ಟು ಸರಕಾರಿ ಜಮೀನಿದ್ದು, ಸುಮಾರು 150 ಎಕರೆ ಒತ್ತುವರಿಗೊಂಡಿತ್ತು. ಎಲೆಮಲ್ಲಪ್ಪ ಶೆಟ್ಟಿಕೆರೆ ನೀರು ಹರಿದುಬಂದಿರುವ ಕಾರಣದಿಂದ ಬಹಳಷ್ಟು ಒತ್ತುವರಿ ಪ್ರದೇಶ ಮುಳುಗಡೆಗೊಂಡಿದೆ. ಪ್ರಸ್ತುತ ಸುಮಾರು 76 ಎಕರೆ ಪ್ರದೇಶವನ್ನು ತೆರವುಗೊಳಿಸಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಗಡಿ ಗುರುತಿಸುವ ಸಲುವಾಗಿ ಜೆಸಿಬಿ ಯಂತ್ರದಿಂದ ಗುಂಡಿ ತೋಡಲಾಗುತ್ತಿದೆ.
ತೆರವು ಗೊಳಿಸಿರುವ ಪ್ರದೇಶದ ಸುತ್ತಲೂ ಮುಳ್ಳುತಂತಿ ನಿರ್ಮಿಸುವ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ಒಪ್ಪಿಸಲಾಗಿದೆ. ಕಾರ್ಯಚರಣೆ ಇನ್ನೂ 3 ದಿನಗಳ ಕಾಲ ನಡೆಯಲಿದ್ದು, ಸಂಪೂರ್ಣ ಒತ್ತುವರಿಯನ್ನು  ತೆರವುಗೊಳಿಸಿ ಸ್ವಾಧೀನಪಡಿಸಿಕೊಳ್ಳಲಾಗುವುದು. ಮುಳ್ಳುತಂತಿ ನಿರ್ಮಿಸಿದ ನಂತರ ಅತಿಕ್ರಮಣಕ್ಕೆ ಪ್ರಯತ್ನಿಸಿದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಾಲೂಕಿನ ಇತರೆಡೆಯೂ ಸರಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಈಗಾಗಲೇ ಕಂದಾಯ ಇಲಾಖೆ ಅಧಿಕಾರಿಗಳು ಅಳತೆ ಮಾಡಿ ಗಡಿ ನಿಗದಿ ಪಡಿಸಿದ್ದಾರೆ. ರೈತರು ಸ್ವತಃ ತೆರವುಗೊಳಿಸಲು ವಿಫಲವಾದಲ್ಲಿ ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದರು.
ತೆರವುಗೊಳಿಸಿದ ಜಾಗದಲ್ಲಿ ಸೀಮೆಬದನೆಕಾಯಿ, ಚಪ್ಪರದ ಅವರೆಕಾಯಿ, ಟೊಮೊಟೋ, ತೊಂಡೆಕಾಯಿ ಬೆಳೆದಿದ್ದು ಕಂಡು ಬಂತು. ಸ್ಥಳದಲ್ಲಿದ್ದ ರೈತರು ಮತ್ತಷ್ಟು ಕಾಲಾವಕಾಶ ನೀಡಲು ಮಾಡಿದ ಮನವಿ ಯತ್ನ ವನ್ನು ಜಿಲ್ಲಾಧಿಕಾರಿಗಳು ತಿರಸ್ಕರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement