ಒಳಾಂಗಣ ಷಟಲ್ ಕ್ರೀಡಾಂಗಣ ಉದ್ಘಾಟನೆ
ಕನಕಪುರ: ನೂರಾ ಮೂವತ್ತು ಕೋಟಿ ಜನಸಂಖ್ಯೆಯ ಭಾರತದಲ್ಲಿ ಕ್ರೀಡಾಪಟುಗಳ ಸಂಖ್ಯೆ ಬೆರಳೆಣಿಕೆಯಷ್ಟಿರುವುದು ದುರದೃಷ್ಟಕರ. ದೈಹಿಕ, ಮಾನಸಿಕ ಸದೃಢತೆ ಬಯಸುವ ಕ್ರೀಡಾಪಟುಗಳಿಗೆ ಸಂಘ ಸಂಸ್ಥೆಗಳು ಹಾಗೂ ಸರ್ಕಾರ ಹೆಚ್ಚಿನ ಪ್ರೊತ್ಸಾಹ ನೀಡಬೇಕು ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಅವರು ಕನಕಪುರದ ಟೌನ್ ಟೆನ್ನಿಸ್ಕ್ಲಬ್ ಆವರಣದಲ್ಲಿ ಒಳಾಂಗಣ ಷಟಲ್ ಕ್ರೀಡಾಂಗಣದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಟಿಟಿಸಿ ಅಧ್ಯಕ್ಷ ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು.
ಸಚಿನ್ ತೆಂಡೂಲ್ಕರ್ಗೆ ಭಾರತರತ್ನ ನೀಡಿರುವುದು ಕೇಂದ್ರ ಸರ್ಕಾರ ಕ್ರೀಡಾ ಕ್ಷೇತ್ರಕ್ಕೆ ಪರೋಕ್ಷವಾಗಿ ಉನ್ನತ ಉತ್ತೇಜನ ನೀಡಿದಂತಾಗಿದೆ. ಕ್ರೀಡಾಪಟುಗಳು ಉತ್ಸಾಹದಿಂದ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತಾಗಿದೆ. ಯುವ ಸಮುದಾಯ ಟಿವಿ, ಇಂಟರ್ನೆಟ್ ಗೇಮ್ ಹಾಗೂ ಮೊಬೈಲ್ ಗೇಮ್ಗಳಲ್ಲಿ ಆಸಕ್ತಿ ವಹಿಸದೆ, ದೈಹಿಕ ಮಾನಸಿಕ ಸ್ವಾಸ್ಥ್ಯ ಬೆಳೆಸುವ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಬೇಕು ಎಂದು ಡಿ.ಕೆ.ಸುರೇಶ್ ಕರೆ ನೀಡಿದರು. ಕನಕಪುರದಲ್ಲಿ 50 ಎಕರೆ ಸ್ಥಳದಲ್ಲಿ ಬೃಹತ್ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಸುರೇಶ್ ತಿಳಿಸಿದರು.
ಜಿಪಂ ಸದಸ್ಯ ಇಕ್ಬಾಲ್ ಹುಸೇನ್, ಟಿಟಿಸಿ ಮಾಜಿ ಅಧ್ಯಕ್ಷ ವಿಜಯದೇವ್, ಯದುನಂದನಗೌಡ, ಬಿ.ಆರ್. ಗಣೇಶ್ ಪಾಲ್ಗೊಂಡಿದ್ದರು.