ಪ್ರೌಢಶಾಲೆಗೆ ಆಗ್ರಹಿಸಿ ಮಾನವ ಸರಪಳಿ
ಸೂಲಿಬೆಲೆ: ಸರ್ಕಾರದಿಂದ ಮಂಜೂರಾತಿಯಾಗಿರುವ ಪ್ರೌಢಶಾಲೆಯನ್ನು ನಿರ್ಮಾಣ ಮಾಡುವಂತೆ ಒತ್ತಾಯಿಸಿ ಶನಿವಾರ ಪಟ್ಟಣದಲ್ಲಿ ಧರಣಿ ನಡೆಸಿ ಮಾನವ ಸರಪಳಿ ಮೂಲಕ ಪ್ರತಿಭಟನೆ ನಡೆಸಲಾಯಿತು.
ಉರ್ದು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ 10ಕ್ಕೂ ಹೆಚ್ಚು ಕೊಠಡಿಗಳನ್ನು ನಿರ್ಮಾಣ ಮಾಡಲು ಸರ್ಕಾರದಿಂದ ಮಂಜೂರಾತಿ ಸಿಕ್ಕಿದ್ದು, ಇದರ ಪ್ರಕಾರ ಎಲ್ಲಿ ಪ್ರೌಢಶಾಲೆ ಕಟ್ಟಲು ಮಂಜೂರಾಗಿದೆಯೋ ಅಲ್ಲೇ ಕಟ್ಟಲು ಸಹಕರಿಸಿ, ಶಿಕ್ಷಣ ಎಲ್ಲರ ಹಕ್ಕು, ವಿದ್ಯಾಭ್ಯಾಸದಲ್ಲಿ ರಾಜಕೀಯಬೇಡ ಎಂಬ ಘೋಷಣೆಯ ಬ್ಯಾನರ್ ಹಾಕಿ ಹಳೇ ಬಸ್ ನಿಲ್ದಾಣದ ಬಳಿ ಧರಣಿ ಕುಳಿತರು. ನಂತರ ಕೆಲ ಹೊತ್ತು ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿದ್ದರು.
ಈ ವೇಳೆ ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ಹೊಸಕೋಟೆ ತಹಸೀಲ್ದಾರ್ ನಾರಾಯಣಪ್ಪ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು.
ಪಿಎಸ್‌ಐ ಸಂದೀಪ್ ಕೌರ್ ಸೂಕ್ತ ಪೊಲೀಸ್ ಬಂದೋಬಸ್ ಏರ್ಪಡಿಸಿದ್ದರು. ಹಲವಾರು ಮುಖಂಡರು ಪಾಲ್ಗೊಂಡಿದ್ದರು.