ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಕ್ಕಳ ಜೀವಕ್ಕೆ ಕುತ್ತು

Vishwanath S
Updated On : 18 Nov 2013, 12:47 pm

ಚನ್ನಪಟ್ಟಣ ತಾಲೂಕಿನ ನಾಗವಾರ ಗ್ರಾಮದಲ್ಲಿರುವ ಅಂಗನವಾಡಿ ಕಟ್ಟಡ ತುಂಬಾ ಶಿಥಿಲಗೊಂಡಿದೆ. ಒಳ ಭಾಗದಲ್ಲಿ ಗೋಡೆ ಹಾಗೂ ಮೇಲ್ಚಾವಣಿ ಸೀಳು ಬಿಟ್ಟಿದ್ದು, ಕಟ್ಟಡ ಯಾವಾಗ ಬೇಕಾದರೂ ಕುಸಿಯಬಹುದು ಎನ್ನುವ ಆತಂಕ ಕಾಡುತ್ತಿದೆ.
ಮಳೆಗಾಲದಲ್ಲಿ ಸೋರುತ್ತದೆ ಈ ಅಂಗನವಾಡಿ ಕಟ್ಟಡದ ಮಾಳಿಗೆ. ಈ ಅಂಗನವಾಡಿ ಕೇಂದ್ರದಲ್ಲಿ 50ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಪೋಷಕರು ಈ ಕೇಂದ್ರಕ್ಕೆ ಮಕ್ಕಳನ್ನು ಕಳುಹಿಸಿ, ನೆಮ್ಮದಿಯಿಂದ ಇರಲಾಗದ ಸ್ಥಿತಿ ಎದುರಾಗಿದೆ.
ದಿನಕ್ಕೊಂದು ಅಗ್ಗದ ಯೋಜನೆ ಪ್ರಕಟಿಸುತ್ತಲೇ ಇರುವ ಸರ್ಕಾರವು ರಾಜ್ಯದಲ್ಲಿರುವ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಸುಸಜ್ಜಿತ ಸ್ವಂತ ಕಟ್ಟಡ ಸೌಲಭ್ಯ ಕಲ್ಪಿಸಲು ಮುಂದಾಗದಿರುವುದು ವಿಪರ್ಯಾಸದ ಸಂಗತಿಯೇ ಸರಿ.
ಒಂದೊಮ್ಮೆ ಗೋಡೆ, ಮೇಲ್ಚಾವಣಿ ಕುಸಿದು ಅನಾಹುತ ಸಂಭವಿಸಿದ ನಂತರ ಪರಿಹಾರ ಕ್ರಮ ಕೈಗೊಳ್ಳುವ ಬದಲು ಈಗಲೇ ಮುಂಜಾಗ್ರತೆ ವಹಿಸುವುದು ಅಗತ್ಯ. ನಾಗವಾರದಲ್ಲಿರುವ ಅಂಗನವಾಡಿಯ ಶಿಥಿಲ ಕಟ್ಟಡವನ್ನು ಕೆಡವಿ, ಹೊಸ ಕಟ್ಟಡ ನಿರ್ಮಿಸಬೇಕು.
ಈ ವಿಷಯವಾಗಿ ಹಲವು ಬಾರಿ ಗಮನ ಸೆಳೆದಿದ್ದರೂ ಪ್ರಯೋಜನವಾಗಿಲ್ಲ. ದಪ್ಪ ಚರ್ಮದ ಅಧಿಕಾರಿಗಳು ಇನ್ನಾದರೂ ಈ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಲಿ. ಹೊಸ ಕಟ್ಟಡ ನಿರ್ಮಿಸುವವರೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗಲಿ.
- ಎಂ.ಕೆ.ಅಶೋಕ್, ಮತ್ತೀಕೆರೆ
 
ತಂತಿ ಬೇಲಿ ತೆರವುಗೊಳಿಸಿ
ಜಿಲ್ಲಾ ಕೇಂದ್ರವಾಗಿರುವ ರಾಮನಗರದ ಐಜೂರು ಸಂಚಾರಿ ವೃತ್ತದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯ ವಿಭಜಕಕ್ಕೆ ತಂತಿ ಬೇಲಿ ಅಳವಡಿಸುವ ಮೂಲಕ ಪೊಲೀಸ್ ಇಲಾಖೆಯು ಪಾದಚಾರಿ ಜನರ ಜೀವದ ಜತೆಗೆ ಚೆಲ್ಲಾಟವಾಡುತ್ತಿದೆ.
ವಿಭಜಕಕ್ಕೆ ಒಂದಿಷ್ಟು ದೂರ ಕಬ್ಬಿಣದ ಬ್ಯಾರಿಕೇಡ್ ಅಳವಡಿಸಲಾಗಿದೆ. ಮತ್ತಷ್ಟು ದೂರ ಬೇಲಿಗಳಿಗೆ ಹಾಕುವ ಮುಳ್ಳು ತಂತಿಯನ್ನು ಹಾಕಿದೆ. ಹಗಲು ವೇಳೆಯೇ ಈ ತಂತಿ ಕಾಣುವುದಿಲ್ಲ. ಇನ್ನು ರಾತ್ರಿ ವೇಳೆ ರಸ್ತೆ ದಾಟುವವರ ಪಾಡು ಹೇಳತೀರದಾಗಿದೆ.
ತಂತಿಯನ್ನು ಗಮನಿಸದೆ ರಸ್ತೆ ದಾಟಲು ಮುಂದಾಗುವವರು ಎಡವಿ ಬೀಳುತ್ತಲೇ ಇದ್ದಾರೆ. ಕೆಲವೊಮ್ಮೆ ಪ್ಯಾಂಟ್, ಪಂಚೆ, ಮಹಿಳೆಯರ ಸೀರೆ ಸೆರಗಿಗೆ ಸುತ್ತಿಕೊಳ್ಳುವ ಮುಳ್ಳಿನ ತಂತಿಯಿಂದ ಸಾಕಷ್ಟು ಮಂದಿ ಬಿದ್ದು, ಗಾಯಗೊಂಡಿದ್ದಾರೆ.
ಒಂದೊಮ್ಮೆ ಹೀಗೆ ಪಾದಚಾರಿಗಳು ಮುಳ್ಳು ತಂತಿಯಿಂದ ಬಿದ್ದಾಗ ಹೆದ್ದಾರಿಯಲ್ಲಿ ಯಾವುದಾದರೂ ಭಾರಿ ವಾಹನವೇನಾದರೂ ಸಾಗಿ ಬಂದರೆ ಸಾವು ಖಚಿತ. ಇನ್ನಾದರೂ ಪೊಲೀಸ್ ಇಲಾಖೆ ಎಚ್ಚೆತ್ತು, ಈ ಅವೈಜ್ಞಾನಿಕ ತಂತಿ ಬೇಲಿ ತೆರವುಗೊಳಿಸಬೇಕು.
- ಶ್ರೀಧರ್, ರಾಮನಗರ.

ಕುಡಿಯುವ ನೀರಿಗೆ ಹಾಹಾಕಾರ
ರಾಮನಗರ ಮತ್ತು ಚನ್ನಪಟ್ಟಣ ತಾಲೂಕಿನಲ್ಲಿ ಬೇಸಿಗೆಗೆ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ, ಮುಂದಿನ ಬೇಸಿಗೆ ಎಷ್ಟೊಂದು ಭೀಕರವಾಗಲಿದೆ ಎನ್ನುವುದು ಅರಿವಾಗುತ್ತದೆ.
ಕಳೆದೆರಡು ವರ್ಷ ಸತತವಾಗಿ ಕಾಡಿದ ಭೀಕರ ಬರದಿಂದ ಎಲ್ಲೆಡೆ ಅಂತರ್ಜಲ ಕುಸಿದಿದೆ. ಬಹುತೇಕ ಕೊಳವೆ ಬಾವಿಗಳು ಈಗಾಗಲೇ ಬತ್ತಿ ಹೋಗಿವೆ. ಅಳಿದುಳಿದ ಕೊಳವೆ ಬಾವಿಗಳಲ್ಲೂ ನೀರಿನ ಪ್ರಮಾಣ ಕುಸಿದಿದೆ.
ಈ ವರ್ಷವೂ ಯಾವುದೇ ಕೆರೆ, ಕಟ್ಟೆಗಳು ಭರ್ತಿಯಾಗಿಲ್ಲ. ಹೀಗಾಗಿ ಅಂತರ್ಜಲ ಮತ್ತಷ್ಟು ಕುಸಿತವಾಗಿದೆ. ಹಿಂಗಾರು ಅಂತ್ಯದಲ್ಲೇ ಕುಡಿಯುವ ನೀರಿಗಾಗಿ ಜನರು ರಾತ್ರಿಯೆಲ್ಲಾ ಜಾಗರಣೆ ಮಾಡುವ ಸ್ಥಿತಿ ಬಹುತೇಕ ಹಳ್ಳಿಗಳಲ್ಲಿ ಎದುರಾಗಿದೆ.
ಹೀಗಾಗಿ ಸಚಿವರು, ಸಂಸದರು, ಶಾಸಕರು ಮತ್ತು ಜಿಲ್ಲಾಡಳಿತ ಮುಂದಿನ ಬೇಸಿಗೆಯಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ತಕ್ಷಣವೇ ಕಾರ್ಯಕ್ರಮ ರೂಪಿಸಿ ಜನರು ಬೀದಿಗಿಳಿಯುವುದನ್ನು ತಪ್ಪಿಸಲಿ.
- ಕೊತ್ತೀಪುರ ರಾಮಂಜು, ರಾಮನಗರ.

ನಿಲುಗಡೆಗೆ ಕ್ರಮ ಕೈಗೊಳ್ಳಿ
ಪ್ರಮುಖ ರೈಲು ಗಾಡಿಗಳ ನಿಲುಗಡೆ ವಿಷಯದಲ್ಲಿ ಬೆಂಗಳೂರು-ಮೈಸೂರು ನಡುವೆ ಇರುವ ಎರಡು ಜಿಲ್ಲೆಗಳ ಪೈಕಿ ಮಂಡ್ಯಕ್ಕೆ ಬೆಣ್ಣೆ, ರಾಮನಗರಕ್ಕೆ ಸುಣ್ಣ ಎನ್ನುವ ಧೋರಣೆಯನ್ನು ನೈಋತ್ಯ ರೇಲ್ವೆ ಅನುಸರಿಸುತ್ತಿದೆ.
ಯಶವಂತಪುರದಿಂದ ಕಣ್ಣೂರಿಗೆ ತೆರಳುವ ರೈಲು, ಚಾಮುಂಡಿ, ಟಿಪ್ಪು, ತಂಜಾವೂರು ಎಕ್ಸ್‌ಪ್ರೆಸ್ ಸೇರಿದಂತೆ 8ಕ್ಕೂ ಹೆಚ್ಚು ರೈಲು ಗಾಡಿಗಳು ಮಂಡ್ಯ ನಿಲ್ದಾಣದಲ್ಲಿ ನಿಲುಗಡೆ ನೀಡುತ್ತಿವೆ. ಆದರೆ, ಮತ್ತೊಂದು ಜಿಲ್ಲಾ ಕೇಂದ್ರ ರಾಮನಗರದಲ್ಲಿ ನಿಲ್ಲುತ್ತಿಲ್ಲ.
ರಾಮನಗರವು ಜಿಲ್ಲೆಯಾಗಿ ಏಳು ವರ್ಷ ಕಳೆದಿದ್ದರೂ ಇದನ್ನು ಜಿಲ್ಲಾ ಕೇಂದ್ರವೆಂದು ನೈಋತ್ಯ ರೇಲ್ವೆ ವಲಯವಿನ್ನೂ ಪರಿಗಣಿಸಿದಂತೆ ಕಾಣುತ್ತಿಲ್ಲ. ಮಂಡ್ಯದಲ್ಲಿ ನಿಲುಗಡೆ ನೀಡುವ ಎಲ್ಲ ರೈಲುಗಳು ರಾಮನಗರದಲ್ಲೂ ನಿಲ್ಲುವಂತಾಗಬೇಕೆಂಬು ಕೂಗು ಕಳೆದ 7 ವರ್ಷದಿಂದಲೂ ಇದೆ.  ಈ ಭಾಗದ ಹಿಂದಿನ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರು ಸಾಕಷ್ಟು ಪ್ರಭಾವಿ ಆಗಿದ್ದರೂ ರೈಲು ಗಾಡಿಗಳ ನಿಲುಗಡೆಗೆ ಸೂಕ್ತ ಹೋರಾಟ ನಡೆಸಿಲ್ಲ. ಈಗಿನ ಸಂಸದ ಡಿ.ಕೆ.ಸುರೇಶ್ ಅವರಾದರೂ ರೈಲು ನಿಲುಗಡೆ ವಿಷಯದಲ್ಲಿ ಕಾಳಜಿ ವಹಿಸಿ, ಇಲ್ಲಿನ ಸಹಸ್ರಾರು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು.
- ಎಂ.ಆರ್.ಪುಣ್ಯಶ್ರೀ, ಚನ್ನಪಟ್ಟಣ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement