ಮನೆಯಂಗಳದ ಕನ್ನಡ ಸಾಹಿತ್ಯ ಕಾರ್ಯಕ್ರಮ
ವಿಜಯಪುರ: ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದುವಂತಹ ಶಿಶುನಾಳ ಶರೀಫರ ಕನ್ನಡ ಪದ್ಯಗಳು ಆಗಾಗ ಜನ ಸಾಮಾನ್ಯರಲ್ಲಿ ಪ್ರತಿ ಧ್ವನಿಸುತ್ತಿರುತ್ತವೆ. ರಚನೆಯಾಗಿರುವ ಪದ್ಯಗಳು ಕನ್ನಡ ಸಾಹಿತ್ಯಕ್ಕೆ ಷರೀಫರ ಕೊಡುಗೆಯಾಗಿದೆ ಎಂದು ಸಾಹಿತಿ ಚಂದ್ರಶೇಖರ್ ಹಡಪದ ತಿಳಿಸಿದರು.
ಅವರು ಪಟ್ಟಣದ ರಫೀಕ್ ಸಾಬ್ ಅವರ ನಿವಾಸದಲ್ಲಿ ದೇವನಹಳ್ಳಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ಭಾಷಾ ಅಲ್ಪ ಸಂಖ್ಯಾತ ಕಸಾಪ ಘಟಕದ ವತಿಯಿಂದ ರಾಜ್ಯೋತ್ಸವ ಮಾಸಾಚರಣೆಯ ಪ್ರಯುಕ್ತ ಏರ್ಪಡಿಸಿದ್ದ ಮನೆಯಂಗಳದ ಕನ್ನಡ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ 18ನೇ ವಾರ್ಡಿನ ಪುರಸಭಾ ಸದಸ್ಯ ಬಲಮುರಿ ಶ್ರೀನಿವಾಸ್ ಮಾತನಾಡಿ ಕನ್ನಡ ಪರ ಸಂಘಟನೆಗಳು ಅಧಿಕಾರ ಲಾಲಸೆ ಮಾತ್ರವಾಗದೇ ಅತಿ ಹೆಚ್ಚು ಸೇವಾ ಚಟುವಟಿಕೆಗಳಿಗೆ ಒತ್ತು ನೀಡಬೇಕು.
ಹತ್ತು ಹದಿನೈದು ವರ್ಷಗಳ ಹಿಂದೆ ಜನರು ಸಾಮಾನ್ಯವಾಗಿ ಗ್ರಂಥಾಲಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು .ಆದರೆ ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಮೊರೆ ಹೋಗುವುದು ಶೋಚನೀಯ ವಿಚಾರವಾಗಿದೆ ಎಂದರು.
ಭಾಷಾ ಅಲ್ಪ ಸಂಖ್ಯಾತ ಕಸಾಪ ಘಟಕದ ಅಧ್ಯಕ್ಷ ಅನೀಸ್ ಉರ್ ರೆಹಮಾನ್ ಮಾತನಾಡಿ ನಾಡಿಗೆ ಟಿಪ್ಪುವಿನ ಕೊಡುಗೆ ಸಾಕಷ್ಟಿದ್ದು ಕನ್ನಡವನ್ನು ವ್ಯಾವಹಾರಿಕ ಭಾಷೆಯನ್ನಾಗಿ ಮಾಡಬೇಕು ಹಾಗೂ ನೆರೆಯ ಭಾಷೆಗಳ ರೀತಿಯಲ್ಲಿ ಕನ್ನಡಿಗರು ಕನ್ನಡದ ಬಗ್ಗೆ ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದರು. ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಚಿ.ಮಾ. ಸುಧಾಕರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಜೆಡಿಎಸ್ ಮುಖಂಡ ರಫೀಕ್ ಸಾಬ್, ಬಿಜೆಪಿ ಮುಖಂಡ ಇಕ್ಬಾಲ್ ಅಹಮದ್, ವಾಜಿದ್, ಅನ್ವರ್, ಪುರಸಭಾ ಮಾಜಿ ಸದಸ್ಯ ನಸೀರ್ ಅಹಮದ್, ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ನಾರಾಯಣಸ್ವಾಮಿ,ಪಟ್ಟಣದ ಕಸಾಪ ಅಧ್ಯಕ್ಷ ಜೆ.ಆರ್.ಮುನಿವೀರಣ್ಣ, ಸಂಘಟನಾ ಕಾರ್ಯದರ್ಶಿ ಬಿರಾದಾರ್ ಮತ್ತ್ತಿತರರು ಭಾಗವಹಿಸಿದ್ದರು.