ಮಹಿಳೆ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ
ರಾಮನಗರ: ಮಹಿಳೆಯನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡಗೊಲ್ಲರ ಹಟ್ಟಿಯ ಮುನಿವೆಂಕಟಮ್ಮ (32) ಕೊಲೆಯಾದ ಮಹಿಳೆ. ಶನಿವಾರ ರಾತ್ರಿ ಅಥವಾ ಭಾನುವಾರ ಬೆಳಗಿನ ಜಾವ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ. ಮುನಿವೆಂಕಟಮ್ಮ 10 ವರ್ಷದ ಹಿಂದೆ ತನ್ನ ಸೋದರ ಮಾವನನ್ನೇ ಮದುವೆಯಾಗಿದ್ದರು. ಮದುವೆಯಾದ 6 ತಿಂಗಳಲ್ಲೇ ಗಂಡನಿಂದ ಬೇರ್ಪಟ್ಟು ಒಂಟಿ ಜೀವನ ನಡೆಸುತ್ತಿದ್ದ ಈಕೆ ಇತ್ತೀಚೆಗೆ ಸೊಲ್ಲಾಪುರಿ ಎಂಬುವನ ಜತೆ ಜತೆ ವಾಸಿಸುತ್ತಿದ್ದು, ಗರ್ಭಿಣಿಯಾಗಿದ್ದರು.
ಸೊಲ್ಲಾಪುರಿ ಬೇರೊಬ್ಬರ ಜತೆ ವಾಸಿಸುತ್ತಿದ್ದುದ್ದರಿಂದ ಕುಪಿತಗೊಂಡಿದ್ದ ಆತನ ಪತ್ನಿ ಮತ್ತು ಮಕ್ಕಳೇ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮುನಿವೆಂಕಟಮ್ಮನ ತಂದೆ ನೀಡಿರುವ ದೂರಿನ ಮೇರೆಗೆ ಕೊಲೆ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಾರಿಗೆ ಬೆಂಕಿ: ದೊಡ್ಡಬಳ್ಳಾಪುರ ಕುಟುಂಬ ಪಾರು
ದೇವನಹಳ್ಳಿ: ಪುಟ್ಟಪರ್ತಿಯ ಸಾಯಿಬಾಬ ಸಮಾಧಿ ಹಾಗೂ ಪ್ರಶಾಂತ ಮಂದಿರ ದರ್ಶನ ಮುಗಿಸಿಕೊಂಡು ವಾಪಸಾಗುತ್ತಿದ್ದಾಗ ಕಾರಿಗೆ ಬೆಂಕಿ ಹೊತ್ತು ಉರಿದರೂ ಕುಟುಂಬವೊಂದು ಅಚ್ಚರಿಯ ರೀತಿಯಲ್ಲಿ ಅಪಾಯದಿಂದ ಪಾರಾದ ಘಟನೆ ಪೆರೇಸಂದ್ರ ಬಳಿ ನಡೆದಿದೆ. ಭಾನುವಾರ ಬೆಳಗ್ಗೆ ದೊಡ್ಡಬಳ್ಳಾಪುರ ತಾಲೂಕು ಕುರುಬರ ಸಂಘದ ಅಧ್ಯಕ್ಷ ತಿಮ್ಮೇಗೌಡ ಅವರು ಪತ್ನಿ ಲತಾ ಹಾಗೂ ಪುತ್ರ ಶಶಿ ಅವರೊಂದಿಗೆ ಪುಟ್ಟಪರ್ತಿಗೆ ತೆರಳಿದರು. ದೊಡ್ಡಬಳ್ಳಾಪುರಕ್ಕೆ ವಾಪಸ್ ಬರುವಾಗ ರಾತ್ರಿ ಎಂಟು ಗಂಟೆ ಸಮಯದಲ್ಲಿ ಪೆರೇಸಂದ್ರ ಬಳಿ ಕಾರಿನಲ್ಲಿ ಏನೋ ವಾಸನೆ ಬರುತ್ತಿದೆ ಎಂದು ತಿಳಿದು ಕಾರಿನಿಂದ ಮೂವರು ಇಳಿದರು. ಕೆಲವೇ ಸೆಕೆಂಡ್ಗಳಲ್ಲಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಭಸ್ಮವಾಯಿತು. ಅದೃಷ್ಟವಶಾತ್ ಕುಟುಂಬದ ಸದಸ್ಯರೆಲ್ಲ ಕಾರಿನ ಹೊರಗೆ ಇದ್ದ ಕಾರಣ ಭಾರಿ ಅಪಾಯ ತಪ್ಪಿತು.