ಸಮುದಾಯ ಭವನ ನಿರ್ಮಾಣಕ್ಕೆ ಅಡಿಗಲ್ಲು
ಕ.ಪ್ರ.ವಾರ್ತೆ, ದೊಡ್ಡಬಳ್ಳಾಪುರ,ನ.16
ರಾಜ್ಯದ ಸುಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬರುವ ಭಕ್ತಾದಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಸಮುದಾಯ ಭವನ, ಕಲ್ಯಾಣ ಮಂದಿರ ಮತ್ತು ವಸತಿ ಗೃಹ ನಿರ್ಮಾಣ ಮಾಡಲಾಗುತ್ತಿದೆ ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವಿ. ಕೃಷ್ಣಪ್ಪ ಹೇಳಿದರು.
ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ತಾಲೂಕು ಒಕ್ಕಲಿಗರ ಸಂಘದ ನೇತೃತ್ವದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಲ್ಯಾಣ ಮಂಟಪ, ಸಮುದಾಯ ಭವನ ಕಟ್ಟಡಗಳ ಶಂಕುಸ್ಥಾಪನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಘಾಟಿ ಕ್ಷೇತ್ರಕ್ಕೆ ಪ್ರತಿದಿನ ಸಾವಿರಾರು ಭಕ್ತರು ಬರುತ್ತಾರೆ. ಇಲ್ಲಿಯೇ ಅನೇಕ ಕಲ್ಯಾಣ ಕಾರ್ಯಗಳನ್ನೂ ನೆರವೇರಿಸುತ್ತಾರೆ. ಆದರೆ ಇಲ್ಲಿ ಸುಸಜ್ಜಿತವಾದ ಕಲ್ಯಾಣ ಮಂದಿರ, ಸಮುದಾಯ ಭವನ ಸೇರಿದಂತೆ ವಸತಿ ಸಮಸ್ಯೆ ಕಾಡುತ್ತಿದೆ. ಸಮಾಜದ ಎಲ್ಲ ವರ್ಗದ ಬಡವರಿಗೆ, ಭಕ್ತಾದಿಗಳಿಗೆ ಲಭ್ಯವಾಗುವಂತೆ ಸವಲತ್ತುಗಳನ್ನು ಕಲ್ಪಿಸಬೇಕಿದೆ. ಈ ನಿಟ್ಟಿನಲ್ಲಿ ಒಕ್ಕಲಿಗರ ಸಂಘ ಈ ಕೆಲಸವನ್ನು ಕೈಗೆತ್ತಿಕೊಂಡಿದ್ದು, ದಾನಿಗಳ ಸಹಾಯ ಅತ್ಯವಶ್ಯಕವಾಗಿದೆ ಎಂದರು.
ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ ಉದ್ಘಾಟನೆ ನೆರವೇರಿಸಿದರು. ಒಕ್ಕಲಿಗ ಮುಖಂಡ ಕೆ.ಎಂ.ಹನುಮಂತರಾಯಪ್ಪ ಮಾತನಾಡಿ, ತಾಲೂಕಿನಲ್ಲಿ ಒಕ್ಕಲಿಗ ಸಮುದಾಯ ಗಣನೀಯ ಸಂಖ್ಯೆಯಲ್ಲಿದೆ. ಸಂಕಷ್ಟದಲ್ಲಿದ್ದ ಸಂಘಟನೆ ಚೇತರಿಸಿಕೊಂಡು ಸಮಾಜಸ್ನೇಹಿ ಕಾರ್ಯಗಳನ್ನು ನಡೆಸುವಂತಾಗಿದೆ. ಈ ರೀತಿಯ ಕಾರ್ಯಗಳು ನಿರಂತರವಾಗಿ ನಡೆಯಬೇಕಿದೆ. ಇದಕ್ಕೆ ಸಮುದಾಯದ ಸಹಭಾಗಿತ್ವ ಮುಖ್ಯ ಎಂದರು.
ಇದೇ ಸಂದರ್ಭದಲ್ಲಿ ಶ್ರೀಕ್ಷೇತ್ರದಲ್ಲಿ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಿಕೊಟ್ಟ ವಸಂತ್ ಅವರನ್ನು
ಸನ್ಮಾನಿಸಲಾಯಿತು. ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎನ್.ಹನುಮಂತೇಗೌಡ, ಬಮೂಲ್ ಅಧ್ಯಕ್ಷ ಮಂಜುನಾಥ್, ಸಂಘದ ಮುಖಂಡರಾದ ಬಿ.ಸಿ.ವೆಂಕಟೇಶ್, ಸಿ.ಡಿ.ಸತ್ಯನಾರಾಯಣಗೌಡ, ಎಚ್.ಅಪ್ಪಯ್ಯಣ್ಣ, ಬಿ.ಸಿ.ನಾರಾಯಣಸ್ವಾಮಿ, ಪ್ರೊ.ಕೆ.ಎಂ.ನಾಗರಾಜ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಚುಂಚೇಗೌಡ, ಟಿಎಪಿಎಂಸಿಎಸ್ ಅಧ್ಯಕ್ಷ ವಿ.ಆಂಜನಪ್ಪ, ಕಿಮ್ಸ್ ಮಾಜಿ ಅಧ್ಯಕ್ಷ ಬಿ.ಮುನೇಗೌಡ ಮತ್ತಿತರರು ಭಾಗವಹಿಸಿದ್ದರು.