ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಿ.ಎನ್.ಆರ್.ರಾವ್‌ಗೆ ಅಭಿನಂದನೆ

Vishwanath S
Updated On : 18 Nov 2013, 12:46 pm

ವಿಜಯಪುರ: ಭಾರತರತ್ನ ಪುರಸ್ಕೃತ, ಕನ್ನಡ ನಾಡಿನ ಹಿರಿಯ ಹಾಗೂ ಜನಪರ ವಿಜ್ಞಾನಿ  ಕರ್ನಾಟಕ ರತ್ನ ಪ್ರೊ.ಸಿ.ಎನ್.ಆರ್.ರಾವ್ ಅವರನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕಾರ್ಯಧ್ಯಕ್ಷಹುಲಿಕಲ್ ನಟರಾಜ್ ಅಭಿನಂದಿಸಿದ್ದಾರೆ.
ಕಳೆದ ಏಳು ದಶಕಗಳಿಂದ ನಿರಂತರವಾದ ಪರಿಶ್ರಮದ ಮೂಲಕ ವೈಜ್ಞಾನಿಕ ಕ್ಷೇತ್ರದಲ್ಲಿ ಮಾಡಿದ ಸಂಶೋದನೆ, ಕಟ್ಟಿದ ವೈಜ್ಞಾನಿಕ ಸಂಸ್ಥೆಗಳು ಹಾಗೂ ಜನಪರ ವಿಜ್ಞಾನ ಸಂಘಟನೆಗಳಿಗೆ ಅವರು ನೀಡಿದ ಪ್ರೋತ್ಸಾಹ ಅಪಾರವಾದುದು. ಅವರಿಗೆ ಈ ಪ್ರಶಸ್ತಿ ಬಂದಿರುವುದರಿಂದ ಪ್ರಶಸ್ತಿಯ ಗೌರವ ಹೆಚ್ಚಿದಂತಾಗಿದೆ ಎಂದು ಕೆಜೆವಿಎಸ್ ಅಭಿಪ್ರಾಯ ಪಟ್ಟಿದೆ. ರಾಜ್ಯದ ಎಲ್ಲರಿಗೂ ಈ ಪ್ರಶಸ್ತಿ ಸಂತಸ ತಂದಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷರಾದ ಪ್ರೊ. ಎಚ್.ಆರ್. ರಾಮಕೃಷ್ಣರಾವ್, ಕಾರ್ಯದರ್ಶಿ ಈ. ಬಸವರಾಜು ಅಭಿಪ್ರಾಯಪಟ್ಟಿದ್ದಾರೆ.
ಇಂದು ಪ್ರತಿಭಾ ಕಾರಂಜಿ
ವಿಜಯಪುರ: ಇಲ್ಲಿನ ಸೂಲಾಲ ದಿನ್ನೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ  ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನ.18ರಂದು ಬೆಳಿಗ್ಗೆ 10 ಘಂಟೆಗೆ ಪ್ರಾರಂಭವಾಗಲಿದ್ದು ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ವ ಶಿಕ್ಷಣ ಅಭಿಯಾನ ಹಾಗೂ ಕ್ಲಸ್ಟರ್ ಸಂಪನ್ಮೂಲ ಕೇಂದ್ರದ ಸಂಯುಕ್ತಾಶ್ರಯದಲ್ಲಿ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಪ್ರವೇಶಾತಿ ಆರಂಭ
ರಾಮನಗರ: ಕರಾಮುವಿನ ವತಿಯಿಂದ 2013-14ನೇ ಸಾಲಿನ ಬಿಎ, ಬಿಕಾಂ, ಎಂಎ, ಎಂಕಾಂ,  ಕೋರ್ಸುಗಳಿಗೆ ಪ್ರವೇಶಾತಿ ಆರಂಭವಾಗಿದ್ದು,  ಪ್ರಥಮ ಬಿಎ, ಬಿಕಾಂ.ಗೆ ರು.3600, ದ್ವಿತೀಯ ಬಿಎ, ಬಿಕಾಂ.ಗೆ ರು.2800, ಪ್ರಥಮ ಎಂಎ, ಎಂಕಾಂ.ಗೆ ರು.5000, ಅಂತಿಮ ಎಂಎ, ಎಂಕಾಂ.ಗೆ ರು.3800 ಹಾಗೂ ಪ್ರಥಮ ಎಂಎ, ಎಂಸಿಜೆಗೆ ರು.9000 ಪ್ರವೇಶ ಶುಲ್ಕವಾಗಿರುತ್ತದೆ.   ಪ್ರಥಮ ಬಿಎ, ಬಿಕಾಂಗೆ ರು.200ರ ದಂಡ ಶುಲ್ಕದೊಂದಿಗೆ ನ.18 ಕೊನೆಯ ದಿನ, ದ್ವಿತೀಯ ಬಿಎ, ಬಿಕಾಂ.ಗೆ ನ.21, ಪ್ರಥಮ ಎಂಎ, ಎಂಕಾಂ.ಗೆ ನ.19, ಅಂತಿಮ ಎಂಎ, ಎಂಕಾಂ.ಗೆ ಅ.30 ಹಾಗೂ ಪ್ರಥಮ ಎಂಎ, ಎಂಸಿಜೆಗೆ ನ.19 ಕಡೆ ದಿನವಾಗಿದೆ.  
ಪ್ರಥಮ ಬಿಎ, ಬಿಕಾಂ.ಗೆ ರು.400ರ ದಂಡ ಶುಲ್ಕದೊಂದಿಗೆ ಡಿ.20, ದ್ವಿತೀಯ ಬಿಎ, ಬಿಕಾಂ.ಗೆ ಡಿ.11, ಪ್ರಥಮ ಎಂಎ, ಎಂಕಾಂ.ಗೆ ಡಿ.18, ಅಂತಿಮ ಎಂಎ, ಎಂಕಾಂ.ಗೆ ಡಿ.5 ಹಾಗೂ ಪ್ರಥಮ ಎಂಎ, ಎಂಸಿಜೆಗೆ ಡಿ.18 ಕಡೆಯ ದಿನವಾಗಿದೆ. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದಲ್ಲಿ ಶೇ.25 ರಷ್ಟು ರಿಯಾಯಿತಿ ಇರುತ್ತದೆ. ಪ್ರವೇಶ ಪಡೆದ ದಿನದಂದೆ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ಹಾಗೂ ಅಧ್ಯಯನ ಸಾಮಗ್ರಿಗಳನ್ನು ಪ್ರಾದೇಶಿಕ ಕೇಂದ್ರದಿಂದ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ನಗರದ ಶಾಂತಿನಿಕೇತನ ಕಾಲೇಜಿನಲ್ಲಿರುವ ಕರಾಮುವಿ ಪ್ರಾದೇಶಿಕ ನಿರ್ದೇಶಕರು ಅಥವಾ, ಮೊ.9620973666 ಸಂಪರ್ಕಿಸಿ.
ಚೌಡೇಶ್ವರಿ ದೇವಾಲಯದ ಹತ್ತನೇ ವಾರ್ಷಿಕೋತ್ಸವ
ದೇವನಹಳ್ಳಿ: ಇಲ್ಲಿನ ಪುಟ್ಟಪ್ಪನಗುಡಿ ರಸ್ತೆಯಲ್ಲಿರುವ ಶಕ್ತಿ ದೇವತೆ ಶ್ರೀ ಚೌಡೇಶ್ವರಿ ದೇವಾಲಯದ ಹತ್ತನೇ
ವಾರ್ಷಿಕೋತ್ಸವ ಅಂಗವಾಗಿ ಎರಡು ದಿನಗಳ ಧಾರ್ಮಿಕ ಸಮಾರಂಭ ಮತ್ತು  ಶ್ರೀಚಕ್ರ ಪ್ರತಿಷ್ಠಾಪನಾ ಕಾರ್ಯಗಳು ಜೊತೆಗೆ ಮಹಾ ಚಂಡಿ ಹೋಮ ಮತ್ತು ಪೂರ್ಣಾಹುತಿ ಕಾರ್ಯಕ್ರಮಗಳನ್ನು ದೇವಾಲಯ ಭಕ್ತ ಮಂಡಳಿಯವರು ಆಯೋಜಿಸಿದ್ದರು.    ಲೋಕ ಕಲ್ಯಾಣಾರ್ಥವಾಗಿ ಪ್ರತಿಷ್ಠಾಪಿಸಿರುವ ಶ್ರೀಚಕ್ರವನ್ನು ಸುಮಾರು ಎರಡು ಲಕ್ಷ ರು. ವೆಚ್ಚದಲ್ಲಿ  ಕುಂಭಕೋಣಂನಲ್ಲಿ ಪಂಚಲೋಹಗಳಿಂದ ನುರಿತ ಶಿಲ್ಪಿಗಳಿಂದ ತಯಾರು ಮಾಡಲಾಗಿದೆ ಎಂದು ದೇವಾಲಯದ ಆಗಮಿಕರು ತಿಳಿಸಿದ್ದಾರೆ. ಶ್ರೀ ಮುರಳಿಶರ್ಮ ಸ್ವಾಮೀಜಿಗಳು  ನೇತೃತ್ವ ವಹಿಸಿದ್ದರು.
ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ಪ್ರತಿಭಟನೆ ಇಂದು
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೇಂದ್ರವನ್ನಾಗಿ ಘೋಷಿಸಬೇಕು ಮತ್ತು ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳ ಕಚೇರಿಯನ್ನು ಬೆಂಗಳೂರಿನಿಂದ ಕೂಡಲೇ ಇಲ್ಲಿಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ನೇತೃತ್ವದಲ್ಲಿ ನ.18ರ ಸೋಮವಾರ ಬೆಳಗ್ಗೆ 10.30ಕ್ಕೆ ತಾಲೂಕು ಕಚೇರಿ ಮುಂದೆ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ನಿರಂತರ ಹೋರಾಟಗಳು ನಡೆದ ಹಿನ್ನೆಲೆಯಲ್ಲಿ ಶೀಘ್ರವೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು. ಬೇಡಿಕೆಗೆ ಪೂರಕವಾಗಿ ಸ್ಪಂದಿಸಬೇಕು ಎಂಬ ಆಗ್ರಹ ಮುಂದಿಟ್ಟು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಸೂಲಿಬೆಲೆಯಲ್ಲಿ ಪಿಂಚಣಿ ಅದಾಲತ್
ಸೂಲಿಬೆಲೆ: ಪಟ್ಟಣದಲ್ಲಿ ನ.22 ರಂದು ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮ ನಡೆಯಲಿದೆ ಎಂದು ಗ್ರಾಮಲೆಕ್ಕಿಗ ಸುಜ್ಞಾನಮೂರ್ತಿ ತಿಳಿಸಿದ್ದಾರೆ. ನಾಡಕಚೇರಿ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಿಂಚಣಿಗೆ ಸಂಬಂಧಪಟ್ಟಂತೆ ಅರ್ಹ ಫಲಾನುಭವಿಗಳು ಅರ್ಜಿ ನೀಡಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬಹುದು.
ಡಾ.ವೆಂಕಟರೆಡ್ಡಿ ನೆನಪು ಕಾರ್ಯಕ್ರಮ
ದೊಡ್ಡಬಳ್ಳಾಪುರ: ಇಲ್ಲಿನ ತಾಲೂಕು ಕನ್ನಡ ಪಕ್ಷದ ನೇತೃತ್ವದಲ್ಲಿ ಕನ್ನಡ ಚಳವಳಿ ನಾಯಕ, ರೈತ ಹೋರಾಟಗಾರ ಡಾ.ಎನ್.ವೆಂಕಟರೆಡ್ಡಿ ಒಂದು ನೆನಪು ಕಾರ್ಯಕ್ರಮ ನ.18ರ ಸೋಮವಾರ ಮಧ್ಯಾಹ್ನ 3 ಗಂಟೆಗೆ ಕನ್ನಡ ಜಾಗೃತ ಭವನದಲ್ಲಿ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ, ರಾಜ್ಯ ರೈತ ಸಂಘದ ಕಾರ್ಯದರ್ಶಿ ಚುಕ್ಕಿ ನಂಜುಂಡಸ್ವಾಮಿ, ಪ್ರಗತಿಪರ ಚಿಂತಕ ಡಾ.ಸಿ.ಎಸ್. ದ್ವಾರಕಾನಾಥ್, ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ  ಎನ್.ವೆಂಕಟಸ್ವಾಮಿ, ರೈತ ಸಂಘದ ತಾ.ಅಧ್ಯಕ್ಷ ಪ್ರಸನ್ನ, ಕಜಾಪ ಟ್ರಸ್ಟಿ ಸುಲೋಚನಮ್ಮ, ರೈತ ಸಂಘದ ಜಿಲ್ಲಾ ಮುಖಂಡ ಡಾ.ಶ್ರೀನಿವಾಸ್, ಕನ್ನಡಪಕ್ಷದ ತಾಲೂಕು ಅಧ್ಯಕ್ಷ ಸಂಜೀವನಾಯಕ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement