15 ಟನ್ ಗೋಧಿ ಹಿಂದೆ ಕಳುಹಿಸಿದ ಮುಖಂಡರು
ಚನ್ನಪಟ್ಟಣ: ಅಕ್ಷರ ದಾಸೋಹ ಯೋಜನೆಗಾಗಿ ಸರಬರಾಜು ಮಾಡಲಾಗಿದ್ದ ಗೋದಿ ಕಳಪೆ ಗುಣಮಟ್ಟದೆಂದು ಆರೋಪಿಸಿ ತಾಲೂಕಿಗೆ ಆಗಮಿಸಿದ್ದ 15 ಟನ್ ಗೋಧಿಯನ್ನು ಪರಿಶೀಲಿಸಿ ಹಿಂದಕ್ಕೆ ಕಳುಹಿಸಿದ ಘಟನೆ ಮಂಗಳವಾರ ನಡೆದಿದೆ. ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆಯಲ್ಲಿ ಮಧ್ಯಾಹ್ನದ ವೇಳೆ ಗೋದಿಯ ಮೆನು ಸೇರಿಸಲು ಮುಂದಾಗಿರುವ ಶಿಕ್ಷಣ ಇಲಾಖೆ ತಾಲೂಕಿಗೆ ನಾಲ್ಕು ಲಾರಿಗಳಲ್ಲಿ ಗೋಧಿಯನ್ನು ಕಳುಹಿಸಿತ್ತು. ಮೂರು ಲಾರಿಗಳಲ್ಲಿ ಪೂರೈಕೆಯಾಗಿರುವ ಗೋಧಿ ಕಳಪೆ ಗುಣಮಟ್ಟದ್ದು ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಅಕ್ಷರ ದಾಸೋಹದ ಅಧಿಕಾರಿಗಳು ಲಾರಿಯನ್ನು ಹಿಂದಕ್ಕೆ ಕಳುಹಿಸಿದರು. ತಾಲೂಕಿನ ಮಕ್ಕಳಿಗೆ ಕಳಪೆ ಗುಣಮಟ್ಟದ ಗೋಧಿ ಪೂರೈಕೆ ಮಾಡುತ್ತಿರುವ ಬಗ್ಗೆ ಅಕ್ಷರ ದಾಸೋಹ ವಿಭಾಗದ ಸಹಾಯಕ ನಿರ್ದೇಶಕರಿಗೆ ತಾ.ಪಂ ಸದಸ್ಯ ಕಾಂತರಾಜು ಸುದಿ ್ದತಿಳಿಸಿದ ಹಿನ್ನೆಲೆಯಲ್ಲಿ ಸಹಾಯಕ ನಿರ್ದೇಶಕ ವೀರಭದ್ರಪ್ಪ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಕಳಪೆ ಗುಣಮಟ್ಟದ ಗೋದಿಯನ್ನು ಹಿಂದಕ್ಕೆ ಕಳುಹಿಸಿದರು.
ವಿವಿಧ ಕಾರ್ಯಕ್ರಮ
ಚನ್ನಪಟ್ಟಣ: ಕರ್ನಾಟಕ ಜನಪರ ವೇದಿಕೆ ಮೂರು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ನ.28 ರಂದು ರಾಜಧಾನಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ಬೇವೂರು ಯೋಗೇಶ್ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಠಿ ನಡೆಸಿದ ಅವರು ಅಂದು ಸಾಮೂಹಿಕ ವಿವಾಹ, ನಗೆಹಬ್ಬ, ಶಾಶ್ವತ ನೀರಾವರಿಗೆ ಆಗ್ರಹಿಸಿ ಬೃಹತ್ ರ್ಯಾಲಿ ನಡೆಸಲಿದ್ದು ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ರಾಜಕಾರಣಿಗಳು, ನಾಡಪರ ಚಿಂತಕರು, ಚಳುವಳಿಗಾರರು ಸೇರಿದಂತೆ ಸಾಕಷ್ಟು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಾಮೂಹಿಕ ವಿವಾಹ
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 50 ಜೋಡಿಗಳು ಇಲ್ಲಿವರಗೆ ನೋಂದಾಯಿಸಿ ಕೊಂಡಿದ್ದು ಕೊನೆಕ್ಷಣದಲ್ಲಿ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದ ಅವರು. ಮದುವೆಯಾಗುವ ಜೋಡಿಗಳಿಗೆ ತಾಳಿ, ಕಾಲುಂಗುರ, ಸೀರೆ, ರವಿಕೆ, ಪಂಚೆ, ಶರಟು ನೀಡಲಾಗುವುದೆಂದು ತಿಳಿಸಿದರು. ಈ ಕಾರ್ಯಕ್ರಮಕ್ಕೆ ತಾಲೂಕಿನಿಂದ ಅಪಾರ ಮಂದಿ ಪಾಲ್ಗೊಳ್ಳಲಿದ್ದು ಕಾರ್ಯಕ್ರಮಕ್ಕೆ ತೆರಳಲಿರುವ ಕಾರ್ಯಕರ್ತರಿಗೆ ವೇದಿಕೆ ವತಿಯಿಂದ ಉಚಿತ ವಾಹನ ಸೌಕರ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.