3 ನಕಲಿ ಕ್ಲಿನಿಕ್ಗಳಿಗೆ ಬೀಗ
ನೆಲಮಂಗಲ: ಪಟ್ಟಣದಲ್ಲಿರುವ ವಿವಿಧ ಕ್ಲಿನಿಕ್ಗಳ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ದಾಳಿ ನಡೆಸಿದ ತಂಡ ಮೂರು ನಕಲಿ ಕ್ಲಿನಿಕ್ಗಳಿಗೆ ಬೀಗ ಹಾಕಿರುವ ಘಟನೆ ಮಂಗಳವಾರ ನಡೆದಿದೆ.
ಪಟ್ಟಣದಲ್ಲಿ ನಕಲಿ ವೈದ್ಯರು ಹಾಗೂ ಪರವಾನಗಿ ನೋಂದಣಿ ಮಾಡಿಸದೇ ಅನಧಿಕೃತವಾಗಿ ಕ್ಲಿನಿಕ್ಗಳನ್ನು ನಡೆಸುತ್ತಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಗ್ರಾಮಾತಂರ ಜಿಲ್ಲಾಧಿಕಾರಿ ವಿ. ಶಂಕರ್ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಸುನಿಲ್ಚಂದ್ರ ಔರಾತ್ಕರ್, ತಾಲೂಕು ಆರೋಗ್ಯಾಧಿಕಾರಿ ನರಸಿಂಹಯ್ಯ ಅವರ ತಂಡ ದಿಢೀರ್ ದಾಳಿ ನಡೆಸಿದ ಪರಿಣಾಮ ಆಯುರ್ವೇದ ಚಿಕಿತ್ಸೆ ನೀಡುವ ವೈದ್ಯರು ಅಲೋಪತಿ ಔಷಧಿ ನೀಡುತ್ತಿರುವುದನ್ನು ಗುರುತಿಸಿ ಅವರ ಬಳಿ ಇದ್ದ ಔಷಧಗಳನ್ನು ವಶಪಡಿಸಿಕೊಂಡು, ಅವರ ವಿದ್ಯಾರ್ಹತೆ ದಾಖಲೆಗಳನ್ನು ಪರಿಶೀಲಿಸಿ ಅವರ ಕ್ಲಿನಿಕ್ಗಳಿಗೆ ಬೀಗ ಹಾಕಿದ್ದಾರೆ.
ಕಳೆದ 12 ವರ್ಷಗಳಿಂದ ಪರವಾನಗಿ ಪಡೆಯದೆ ನಡೆಸುತ್ತಿದ್ದ ಬಸ್ ನಿಲ್ದಾಣದ ಸಮೀಪದ ಶೋಭಾ ಡಯಾಗ್ನೊಸ್ಟಿಕ್ ಸೆಂಟರ್ ಮೇಲೂ ದಾಳಿ ನಡೆಸಿ ಬೀಗ ಹಾಕಿದ್ದಾರೆ. ಈ ದಾಳಿಯಿಂದಾಗಿ ನಕಲಿ ವೈದ್ಯರು ಪತ್ತೆಯಾಗಿದ್ದಾರೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಸುನಿಲ್ಚಂದ್ರ ಔರಾತ್ಕರ್ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.