ಉದ್ಯೋಗ ಪ್ರತಿಯೊಬ್ಬ ನಾಗರಿಕನ ಹಕ್ಕು
ದೊಡ್ಡಬಳ್ಳಾಪುರ: ದೇಶದ ಅಭಿವೃದ್ಧಿಗಾಗಿ ದುಡಿಯುವ ಹೊಣೆಗಾರಿಕೆ ಪ್ರತಿಯೊಬ್ಬ ಪ್ರಜೆಯ ಮೇಲೂ ಇದೆ. ಉದ್ಯೋಗ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಮತ್ತು ಹಕ್ಕು ಎಂದು ಉದ್ಯೋಗ ತರಬೇತಿ ಇಲಾಖೆ ಅಧಿಕಾರಿ ಸನತ್ಕುಮಾರ್ ಹೇಳಿದರು.
ತಾಲೂಕಿನ ಕನಸವಾಡಿ ಗ್ರಾಮದಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆ, ಕೌಶಲ್ಯ ಅಭಿವೃದ್ಧಿ ನಿಗಮದ ಉಪ ಪ್ರಾದೇಶಿಕ ವಿನಿಮಯ ಕೇಂದ್ರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ನಂತರ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕಾದ ವಿವಿಧ ವೃತ್ತಿ ತರಬೇತಿ ಮತ್ತು ವೃತ್ತಿ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದ ಅವರು, ಸ್ಪರ್ಧಾ ಯುಗದಲ್ಲಿ ಎಲ್ಲ ಬಗೆಯ ಮೂಲಭೂತ ಜ್ಞಾನ ಹೊಂದಿರಬೇಕಾದ್ದು ಅನಿವಾರ್ಯ. ಇಂಗ್ಲಿಷ್ ಮತ್ತು ಕಂಪ್ಯೂಟರ್ ಕುರಿತ ತಿಳಿವಳಿಕೆ ಅಗತ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವ್ಯಾಪ್ತಿಯ ಅನೇಕ ಸೇವಾ ಕ್ಷೇತ್ರಗಳಿಗೆ ಉದ್ಯೋಕಾಂಕ್ಷಿಗಳಾಗಿ ಹೋಗುವವರು ಪ್ರವೇಶ ಪರೀಕ್ಷೆಗಳಿಗೆ ವ್ಯವಸ್ಥಿತ ಸಿದ್ಧತೆ ಮಾಡಿಕೊಳ್ಳಬೇಕು. ವೃತ್ತಪತ್ರಿಕೆಗಳನ್ನು ಓದುವ ಪ್ರವೃತ್ತಿ ಮುಖ್ಯ ಎಂದರು. ಇಲಾಖಾ ಸಹಾಯಕ ನಿರ್ದೇಶಕ ಎಂ.ಬಿ.ತಿಮ್ಮೇಗೌಡ ಮಾತನಾಡಿದರು. ಪ್ರಾಂಶುಪಾಲ ರಾಜಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಉದ್ಯೋಗಾಧಿಕಾರಿ ಗೋವಿಂದರಾಜು, ರಮೇಶ್, ಕಾರ್ಯದರ್ಶಿ ಕೆ.ಮಂಜುಳಾ, ಉಪನ್ಯಾಸಕ ಗೋವಿಂದರಾಜು, ಕಂಬಣ್ಣ, ಉಪೇಂದ್ರ, ಮಂಗಳ ಮತ್ತಿತರರು ಭಾಗವಹಿಸಿದ್ದರು.