ಕಾನೂನಿನ ಸಮರ್ಪಕ ಜಾರಿ ಆಗಲಿ: ರಾಜ್ಯಪಾಲ ಭಾರದ್ವಾಜ್
ಆನೇಕಲ್ಲು: ಸಮಾನತೆಯ ಸಮರ್ಪಕ ಜಾರಿಯಲ್ಲಿ ನ್ಯಾಯಾಂಗ ಪ್ರಮುಖ ಪಾತ್ರವಹಿಸುತ್ತಿದೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ತಿಳಿಸಿದರು.
ಅವರು ಆನೇಕಲ್ಲಿನ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಕಾನೂನು ದಿನಾಚರಣೆಯಲ್ಲಿ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ ಹಾಗೂ ಅಪರಾಧ ಪ್ರಕ್ರಿಯೆ ಸಂಹಿತೆಯು ಉತ್ತಮ ಶಕ್ತಿಯನ್ನು ಹೊಂದಿದ್ದರೂ ಅದರ ಪ್ರಾಮಾಣಿಕ ಬಳಕೆಯಾಗದೇ ಧೂಳಿನಿಂದ ಆವರಿಸಿದೆ.
ಹೊಸ ಪೀಳಿಗೆಯ ಜನ ಕಾನೂನಿವ ಮೊನಚನ್ನು ಇನ್ನಷ್ಟು ಚೂಪು ಮಾಡಿ ದೇಶವಾಸಿಗಳ ಹಿತರಕ್ಷಣೆಗೆ ಬಳಸಬೇಕೆಂದರು.
ಅಪರಾಧ ಹಿನ್ನೆಲೆ ಉಳ್ಳ ರಾಜಕಾರಣಿಗಳು ಚುನಾವಣೆಯಲ್ಲಿ ಭಾಗವಹಿಸಬೇಕೆಂಬ ಅಪೇಕ್ಷೆ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ವಿಷಯ. ಹಣವಂತರಿಂದ ದೇಶದ ಬಡ ಜನರ ಶೋಷಣೆಯಾಗುತ್ತಿದೆ. ನೈಸರ್ಗಿಕ ಸಂಪತ್ತು ಸಾರ್ವಜನಿಕರ ನಡುವೆ ಸಮಾನ ಹಂಚಿಕೆಯಾಗಬೇಕಿದೆ. ಆರೋಗ್ಯ, ಶಿಕ್ಷಣ, ಉದ್ಯೋಗದಿಂದ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದರು. ಸಂವಿಧಾನ ಬದ್ಧವಾದ ಜನರಿಂದ-ಜನರಿಗಾಗಿ ಹೋಗಿ ತನಗಾಗಿ ತನ್ನ ಕುಟುಂಬದವರಿಗಾಗಿ, ಅಲ್ಪ ಪ್ರಮಾಣದಲ್ಲಿ ತನ್ನ ಹಿತ ಚಿಂತಕರ ಏಳಿಗೆಗಾಗಿ ಎಂಬ ಬದಲಾವಣೆ ಹೊಂದಿದೆ ಎಂದು ಛೇಡಿಸಿದರು. ಸ್ವಾರ್ಥಿಗಳಿಂದಾಗಿ ಸಂಸತ್ತು ದೇಗುಲ ಅಪವಿತ್ರವಾಗಿದೆ ಎಂದರು.
ವಕ್ಕಳಿಗೆ ಸಂಸ್ಥಾನದ ನಿರ್ಮಲಾನಂದ ಸ್ವಾಮೀಜಿ ಆಶೀರ್ವಚನ ನೀಡಿ ವಿದ್ಯೆ ಉಳ್ಳವರ ಸ್ವತ್ತು. ಹೆಚ್ಚು ಜ್ಞಾನಾರ್ಜನೆ ಮೂಲಕ ದೇಶ ವಿದೇಶಗಳಲ್ಲಿ ಕಾನೂನು ಸೇವೆ ನೀಡಬಹುದು. ಅದರ ಜೊತೆಗೆ ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯುವ ಕೌಶಲ್ಯ ಮತ್ತು ಕಲೆಯನ್ನು ರೂಡಿಸಿಕೊಳ್ಳಬೇಕೆಂದರು. ವಿಶ್ವಕ್ಕೆ ಶ್ರೇಷ್ಠ ವ್ಯಕ್ತಿಗಳನ್ನು ನೀಡಿದ ಹಾವರ್ಡ್ ವಿಶ್ವ ವಿದ್ಯಾಲಯದಂತೆ ಅಲಯನ್ಸ್ ವಿದ್ಯಾರ್ಥಿಗಳು ಉನ್ನತ ಶಿಖರ ತಲುಪಬೇಕೆಂದು ತಿಳಿಸಿದರು. ಕುಲಪತಿ ಡಾ. ಮಧುಕರ್ ಅಂಗೂರ್, ಡಾ. ಅಯ್ಯಪ್ಪ, ಉಪ ಲೋಕಾಯುಕ್ತ ಸುಭಾಷ್ ಬಿ. ಆದಿ ಮಾತನಾಡಿದರು.